ನ.11ಕ್ಕೆ ಆರೆಸ್ಸೆಸ್ ವಿರುದ್ಧ ‘ದಸಂಸ ಪ್ರತಿರೋಧ ಸಮಾವೇಶ’
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ನ.11ರ ಬೆಳಗ್ಗೆ 11ಗಂಟೆಗೆ ನಗರದ ಗಾಂಧಿ ಭವನದಲ್ಲಿ ಆರೆಸ್ಸೆಸ್ ವಿರುದ್ಧ ‘ದಸಂಸ ಪ್ರತಿರೋಧ ಸಮಾವೇಶ’ವನ್ನು ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕಟನೆ ಹೊರಡಿಸಿದ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಶತಮಾನೋತ್ಸವದ ಉನ್ಮಾದದ ಅಮಲಿನಲ್ಲಿ ತೇಲುತ್ತಿರುವ ಸನಾತನಿಗಳು ಸಂವಿಧಾನ-ಪ್ರಜಾಪ್ರಭುತ್ವ ಹಾಗೂ ಅಂಬೇಡ್ಕರ್ ರವರ ವ್ಯಕ್ತಿ-ವ್ಯಕ್ತಿತ್ವದ ಮೇಲೆ ಒಮ್ಮೆಲೆ ತೀವ್ರ ದಾಳಿಗೆ ಮುಂದಾಗಿದ್ದಾರೆ. ಮುಸ್ಲಿಮರು, ದಲಿತರು, ಕ್ರೈಸ್ತರು ನಂತರದಲ್ಲಿ ಹಿಂದುಳಿದ ಶೂದ್ರ ಸಮುದಾಯಗಳು ಇವರ ಮುಂದಿನ ಗುರಿಯಾಗಿವೆ. ಒಟ್ಟಾರೆ, ಆರೆಸ್ಸೆಸ್-ಬಿಜೆಪಿಗಳಿಗೆ ಮತ್ತೆ ‘ಮನುಸ್ಮೃತಿ’ ಜಾರಿಗೆ ಬರಬೇಕಿದೆ. ಚಾತುರ್ವರ್ಣ ಪದ್ಧತಿಯಂತೆ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳು ಇವರ ಜೀತದಾಳುಗಳಾಗಬೇಕಿದೆ. ಈ ಕಾರಣಕ್ಕಾಗಿಯೇ, ಆರೆಸ್ಸೆಸ್ ಹೇಳಿದಂತೆ ಕೇಳುವ ರಾಜಕಾರಣಿಗಳು ಇವರಿಗೆ ಬೇಕು.
ಭಾರತದ ಸಂವಿಧಾನದ ಮೇಲೆ ಯುದ್ಧ ಸಾರಿರುವ ಆರೆಸ್ಸೆಸ್, ಬಿಜೆಪಿಯವರ ಆಟ ಅತಿಯಾಗಿದೆ. ಇಂತಹ ದೇಶದ್ರೋಹಿಗಳ ಕುತಂತ್ರಗಳನ್ನು ಬಯಲುಗೊಳಿಸಿ ತಕ್ಕ ಪಾಠ ಕಲಿಸದೇ ಇದ್ದರೆ ಭಾಗ್ಯವಿಧಾತ ಭಾರತವನ್ನು ಬಲಿ ಭಾರತವನ್ನಾಗಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.