ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ತುರ್ತು ಸಣ್ಣ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಂಬರುವ ಪೂರಕ ಆಯವ್ಯಯದಲ್ಲಿ ಹೆಚ್ಚುವರಿ ಅನುದಾನ ಒದಗಿಸುವಂತೆ ಸಣ್ಣ ನೀರಾವರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಅತೀಕ್ ಅವರನ್ನು ಭೇಟಿ ಮಾಡಿದ ಸಚಿವರು, ರಾಜ್ಯದ ವಿವಿಧ ಭಾಗಗಳಿಂದ ಶಾಸಕರು ಸಲ್ಲಿಸಿರುವ ಸಣ್ಣ ನೀರಾವರಿ ಕಾಮಗಾರಿಗಳ ಬೇಡಿಕೆಗಳು, ನೀರಿನ ಸಂಗ್ರಹಣೆ, ಬರ ನಿರ್ವಹಣೆ ಹಾಗೂ ತುರ್ತು ನೀರಾವರಿ ಮೂಲಸೌಕರ್ಯ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನದ ಕುರಿತು ಸಮಾಲೋಚನೆ ನಡೆಸಿದರು.

ರಾಜ್ಯದ ಹಲವು ಜಿಲ್ಲೆಗಳು ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂಗ್ರಹಣೆ ಮತ್ತು ಸಣ್ಣ ನೀರಾವರಿ ಮೂಲಸೌಕರ್ಯವನ್ನು ಬಲಪಡಿಸುವ ಅಗತ್ಯ ಹೆಚ್ಚಾಗಿದೆ. ಶಾಸಕರಿಂದಲೂ ಅನೇಕ ತುರ್ತು ಕಾಮಗಾರಿಗಳ ಬಗ್ಗೆ ಮನವಿಗಳು ಬಂದಿವೆ. ಪೂರಕ ಆಯವ್ಯಯದ ಮೂಲಕ ಹೆಚ್ಚುವರಿ ಅನುದಾನ ಒದಗಿಸಿದರೆ ಅಗತ್ಯ ಕಾಮಗಾರಿಗಳನ್ನು ಆದ್ಯತೆಯಿಂದ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ನೀರಾವರಿ ಸೌಲಭ್ಯ ಸಿಗುವುದು ಅವರ ಕೃಷಿ ಉತ್ಪಾದನೆ ಮತ್ತು ಆದಾಯ ಭದ್ರತೆಗೆ ಅತ್ಯಂತ ಮುಖ್ಯ. ಎಸ್ಸಿಪಿ, ಟಿಎಸ್ಪಿ ಅಡಿಯಲ್ಲಿ ಹೆಚ್ಚುವರಿ ಅನುದಾನ ದೊರೆತರೆ ಹೆಚ್ಚಿನ ಅರ್ಹ ರೈತರಿಗೆ ಕೊಳವೆಬಾವಿ ಸೌಲಭ್ಯ ಕಲ್ಪಿಸಿ ಬರ ಪರಿಸ್ಥಿತಿಯ ನಡುವೆಯೂ ಕೃಷಿ ಚಟುವಟಿಕೆಗಳಿಗೆ ಬೆಂಬಲ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.

ಬರ ನಿರ್ವಹಣೆಯನ್ನು ಕೇವಲ ತಾತ್ಕಾಲಿಕ ಪರಿಹಾರಕ್ಕೆ ಸೀಮಿತಗೊಳಿಸದೆ, ಕೆರೆಗಳು, ಚೆಕ್‍ಡ್ಯಾಂಗಳು, ಬಾಂದಾರಗಳು, ಅಂತರ್ಜಲ ಮರುಪೂರಣ ಹಾಗೂ ಇತರೆ ಸಣ್ಣ ನೀರಾವರಿ ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ದೀರ್ಘಕಾಲಿಕ ಜಲ ಭದ್ರತೆ ನಿರ್ಮಿಸುವ ಅಗತ್ಯವಿದೆ. ಪ್ರಸ್ತುತ ಪರಿಸ್ಥಿತಿಯನ್ನು ತುರ್ತು ಅಗತ್ಯವೆಂದು ಪರಿಗಣಿಸಿ, ಸಣ್ಣ ನೀರಾವರಿ ಇಲಾಖೆಗೆ ಪೂರಕ ಆಯವ್ಯಯದಲ್ಲಿ ಹೆಚ್ಚುವರಿ ಅನುದಾನ ಹಾಗೂSCP–TSPಅಡಿಯಲ್ಲಿ ಅಗತ್ಯ ಅನುದಾನ ಒದಗಿಸುವ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವಂತೆ ಆರ್ಥಿಕ ಸಲಹೆಗಾರರನ್ನು ಕೋರಿದ್ದೇನೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಅಮ್ಮಿನಭಾವಿ ಹಾಗೂ ಇಲಾಖೆಯ ಎರಡು ವಲಯಗಳ ಮುಖ್ಯ ಅಭಿಯಂತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor