ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು : ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಮ್ಮಗೊಂಡನಹಳ್ಳಿಯಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಿಂದಾಗಿ ದಂಪತಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಟ್ಟಡದ ನೆಲಮಹಡಿಯಲ್ಲಿದ್ದ ಆಟೊಮೊಬೈಲ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಮೊದಲ ಮಹಡಿಯಲ್ಲಿದ್ದ ದಂಪತಿ ಹೊರಬರಲಾಗದೆ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಆಕಾಶ್ ಹಾಗೂ ಅವರ ಪತ್ನಿ ಬೆಳಗಾವಿ ಜಿಲ್ಲೆಯ ಮುರಗೋಡ್ ಮೂಲದ ನಾಗರತ್ನ ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಆಕಾಶ್ ಹಾಗೂ ನಾಗರತ್ನ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಕಮ್ಮಗೊಂಡನಹಳ್ಳಿಯಲ್ಲಿ ವಾಸವಿದ್ದು, ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದರು. ಅ.24ರ ರಾತ್ರಿ ಸುಮಾರು 8.30ರ ವೇಳೆಗೆ ಕಟ್ಟಡದ ನೆಲಮಹಡಿಯಲ್ಲಿದ್ದ ಆಟೊಮೊಬೈಲ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಮೊದಲ ಮಹಡಿಯಲ್ಲಿದ್ದ ದಂಪತಿಗೆ ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಬೆಂಕಿಯಿಂದ ಆವರಿಸಿದ ಹೊಗೆಯಿಂದಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ದಂಪತಿಯ ಮೃತದೇಹಗಳು ಪತ್ತೆಯಾಗಿವೆ. ಬಳಿಕ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor