Bengaluru | ಕಾರಿನಿಂದ ಗುದ್ದಿ ಕೊಲೆ ಮಾಡಿದ್ದ ಮೂವರು ಆರೋಪಿಗಳ ಬಂಧನ
ಬೆಂಗಳೂರು : ಅತಿಥಿ ಗೃಹವೊಂದರಲ್ಲಿ(ಪಿಜಿ) ಅಡುಗೆ ಕೆಲಸ ಮಾಡುತ್ತಿದ್ದವನನ್ನು ಕಾರಿನಿಂದ ಗುದ್ದಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್ನ ಪಿಜಿ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ರಂಜಿತ್ ಕುಮಾರ್ ಸಾಹು ಮೃತ ದುರ್ದೈವಿಯಾಗಿದ್ದು, ಅಜಯ್ ರಬಿದಾಸ್, ಸಜಲ್ ನಮಾಶೂದ್ರ ಹಾಗೂ ಬಿಜೋನ್ ರಾಯ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಅ.21ರಂದು ಬೆಳಗಿನ ಜಾವ 2 ಗಂಟೆ ಸಮಯದಲ್ಲಿ ರಂಜಿತ್ ಕುಮಾರ್ ಸಾಹು ಹಾಗೂ ಆತನ ಸ್ನೇಹಿತ ಎಲೆಕ್ಟ್ರಾನಿಕ್ ಸಿಟಿಯ ಗಣೇಶ ದೇವಸ್ಥಾನ ಹತ್ತಿರವಿರುವ ಪ್ರಗತಿನಗರದ ರಸ್ತೆಯನ್ನು ದಾಟುತ್ತಿರುವಾಗ ಬಿಳಿ ಬಣ್ಣದ ಸ್ವಿಫ್ಟ್ ಡಿಜೈರ್ ಕಾರು ಅತಿ ವೇಗವಾಗಿ ಬಂದಿದೆ. ಆಗ ಆ ಕಾರಿಗೆ ನಿಧಾನವಾಗಿ ಹೋಗಲು ಕೈ ಸನ್ನೆ ಮಾಡಿದ ವಿಚಾರಕ್ಕೆ ಕಾರಿನಲ್ಲಿದ್ದ ವ್ಯಕ್ತಿಗಳು ಕಾರನ್ನು ಅವರ ಬಳಿ ನಿಲ್ಲಿಸಿ, ಹಲ್ಲೆ ಮಾಡಿದ್ದು, ಗಲಾಟೆ ಮಾಡಿದ್ದಾರೆ. ನಂತರ ರಂಜಿತ್ ಕುಮಾರ್ ಸಾಹುನನ್ನು ಕಾರಿನಿಂದ ಗುದ್ದಿ, ಆತನನ್ನು ಸುಮಾರು 100 ರಿಂದ 150 ಮೀಟರ್ ದೂರ ಎಳೆದುಕೊಂಡು ಹೋಗಿ ಹೊಸೂರು ಸರ್ವಿಸ್ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು ಎನ್ನಲಾಗಿದೆ.
ಈ ಸಂಬಂಧ ರಂಜಿತ್ ಕುಮಾರ್ ಸಾಹುವಿನ ಸ್ನೇಹಿತ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಖಚಿತ ಮಾಹಿತಿಯನ್ನು ಕಲೆಹಾಕಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಡಿತದ ಅಮಲಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಕಾರಿನ ಮಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.