ಬೆಂಗಳೂರು : ಗಣಿಗಾರಿಕೆಗೆ ಅಕ್ರಮವಾಗಿ ಪರವಾನಗಿ ಮಂಜೂರು ಹಾಗೂ ನವೀಕರಣ ಮಾಡಿದ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಲು ರಾಜ್ಯಪಾಲರಿಗೆ ನಿರ್ದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಜಾ ಆದೇಶವನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.

ಬೆಂಗಳೂರಿನ ಉದ್ಯಮಿಯಾದ ಹೆಸರುಘಟ್ಟ ರಸ್ತೆಯ ಎಬಿಜಿ ಬಡಾವಣೆ ನಿವಾಸಿ ಎಂ.ಪಿ. ವೇಣುಗೋಪಾಲ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್‌ ಹಾಗೂ ನ್ಯಾಯಮೂರ್ತಿ ಕೆ.ಎಸ್‌. ಭರತ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಜಾಗೊಳಿಸಿತು.

ವಿಚಾರಣೆ ವೇಳೆ ಸರ್ಕಾರದ ಪರ ರಾಜ್ಯ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ, ಇದೇ ವಿಚಾರವಾಗಿ ಈ ಹಿಂದೆ ಅರ್ಜಿದಾರರು ದಾಖಲಿಸಿದ್ದ ಖಾಸಗಿ ದೂರನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಲೋಕಾಯುಕ್ತರು ಸಹ ದೂರನ್ನು ಪರಿಗಣಿಸಿರಲಿಲ್ಲ. ಹೀಗಿದ್ದರೂ, ಆ ಅಂಶಗಳನ್ನೇ ಆಧರಿಸಿ 2025ರ ಏಪ್ರಿಲ್‌ನಲ್ಲಿ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅವರು ವಿಚಾರಣೆಗೆ ಸತತವಾಗಿ ಗೈರಾಗಿದ್ದಕ್ಕೆ 2025ರ ಸೆಪ್ಟೆಂಬರ್‌ 19ರಂದು ಹೈಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಹಿಂಪಡೆಯುವಂತೆ ಕೋರಿ ಅರ್ಜಿದಾರರು ಈ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅದನ್ನು ವಜಾಗೊಳಿಸಬೇಕು ಎಂದು ಕೋರಿದರು.

ಮತ್ತೊಂದೆಡೆ ಅರ್ಜಿದಾರರ ಪರ ವಕೀಲರು, ಪ್ರಕರಣ ಸಂಬಂಧ ತಮಗೆ ಅರ್ಜಿದಾರರು ಸೂಕ್ತ ಸ್ಪಂದಿಸುತ್ತಿಲ್ಲ. ಆದ್ದರಿಂದ, ಅರ್ಜಿಯಿಂದ ತಾವು ಹಿಂದೆ ಸರಿಯುತ್ತೇವೆ ಎಂದು ತಿಳಿಸಿ ಮೊಮೊ ಸಲ್ಲಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಮಧ್ಯಂತರ ಅರ್ಜಿ ವಜಾಗೊಳಿಸಿತು. ಆ ಮೂಲಕ ಪಿಐಎಲ್‌ ವಜಾ ಆದೇಶವನ್ನು ಕಾಯಂಗೊಳಿಸಿತು.

ಪ್ರಕರಣವೇನು?

ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು 2015ರಲ್ಲಿ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಅನೇಕ ಕಂಪನಿಗಳಿಗೆ ಅಕ್ರಮವಾಗಿ ಗಣಿಗಾರಿಕೆ ಪರವಾನಗಿ ನೀಡಿದ್ದಾರೆ ಹಾಗೂ ಕೆಲವು ಕಂಪನಿಗಳ ಪರವಾನಗಿ ನವೀಕರಿಸಿದ್ದಾರೆ. ಈ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶಿಸಿ, ತನಿಖಾ ವರದಿ ಪಡೆದುಕೊಳ್ಳಬೇಕು. ಅಕ್ರಮವಾಗಿ ಪರವಾನಗಿ ನೀಡಿದ್ದರ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟ ವಸೂಲಿ ಮಾಡಬೇಕು. ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸರ್ಕಾರ ಮತ್ತು ರಾಜ್ಯಪಾಲರಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರರು ಪಿಐಎಲ್‌ ಸಲ್ಲಿಸಿದ್ದರು. ಆ ಅರ್ಜಿಯನ್ನು 2025ರ ಸೆಪ್ಟೆಂಬರ್‌ 19ರಂದು ಹೈಕೊರ್ಟ್‌ ವಜಾಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor