ಬೆಂಗಳೂರು : ರಾಜ್ಯವನ್ನು ಒಡೆಯುವಂತಹ ಅನಾವಶ್ಯಕ ಮಾತುಗಳನ್ನಾಡುವುದು ಸರಿಯಲ್ಲ. ಜವಾಬ್ದಾರಿಯುತ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡಿದವರಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯವಾಗಬೇಕು ಎಂಬ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆಗೆ ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದವರೇ ಆಗಿರಲಿ ಅಥವಾ ಯಾರೇ ಆಗಿರಲಿ, ಯಾವುದಾದರೂ ಭಾಗ ಅಭಿವೃದ್ಧಿಯಾಗಿಲ್ಲ ಎಂದರೆ ಎಲ್ಲರೂ ಸೇರಿ ಸರಕಾರದ ವಿರುದ್ಧ ಹೋರಾಟ ಮಾಡೋಣ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂದಿದೆ. ಪ್ರತ್ಯೇಕ ರಾಜ್ಯ ಕೇಳುವ ಬದಲು ಸಮಗ್ರ ಕರ್ನಾಟಕ ಒಂದಾಗಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು.

ಹಾಸನ ಜಿಲ್ಲೆಯಲ್ಲಿದ್ದ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟುವ ನಿರ್ಧಾರವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತೀರ್ಥಹಳ್ಳಿಯವರಿಗೆ ಆನೆ ನೋಡಿಯೇ ಗೊತ್ತಿರಲಿಲ್ಲ, ಈಗ ನಮ್ಮಲ್ಲೂ ಹಾವಳಿ ಹೆಚ್ಚಾಗಿದೆ. ಕೊಯ್ಲಿಗೆ ಬಂದಿರುವ ಬೆಳೆಯನ್ನು ಆನೆಗಳು ನಾಶಪಡಿಸುತ್ತಿವೆ. ಪರಿಸರ ಉಳಿಯಬೇಕು ಎಂದು ಉಪದೇಶ ನೀಡುವವರು ಹಳ್ಳಿಗಳಿಗೆ ಬಂದು ವಾಸಿಸಿ ನೋಡಲಿ. ಆನೆಗಳು ಎಲ್ಲಿ ಹುಟ್ಟಿ ಬೆಳೆದಿವೆಯೋ ಅಲ್ಲೇ ಕಾಡಿನೊಳಗೆ ಇರಲು ಸರ್ಕಾರ ವೈಜ್ಞಾನಿಕವಾಗಿ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor