ಬೆಂಗಳೂರು : ಗೌರವ ಧನ 15 ಸಾವಿರ ರೂ.ಗಳಿಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ಸರಕಾರ ಲಿಖಿತ ಭರವಸೆ ನೀಡುವವರೆಗೂ ಪಟ್ಟು ಸಡಿಸುವುದಿಲ್ಲ ಎಂದು ಆಶಾಗಳು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಹೋರಾಟಕ್ಕೆ ಶುಭ ಕೋರಿದ ಎಸ್‍ಯುಸಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ, ‘ಆಶಾ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳನ್ನು ಆಲಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಹೋದರೆ, ಮುಖ್ಯಮಂತ್ರಿಗಳೇ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ಆಶಾಗಳ ಗೌರವಧನ ಹೆಚ್ಚಿಸಿದರೆ ಇತರ ಸ್ಕೀಂ ಕಾರ್ಮಿಕರಿಗೂ ಹೆಚ್ಚಿಸಬೇಕಾಗುತ್ತದೆ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನೋಡಬೇಕಿದೆ ಎಂಬ ವಾದಗಳನ್ನು ಮುಖ್ಯಮಂತ್ರಿ ಮುಂದಿಡುತ್ತಿದ್ದಾರೆ. ಅಧಿಕಾರದ ಉನ್ನತ ಸ್ಥಾನದಲ್ಲಿರುವವರು ಜನಸಾಮಾನ್ಯರ ಸಮಸ್ಯೆಗಳಿಗೆ ಕಿವಿಗೊಟ್ಟು ಪರಿಹಾರ ಕಂಡುಕೊಳ್ಳುವುದು ಅವರ ಕರ್ತವ್ಯ. ಇದು ನ್ಯಾಯ-ಅನ್ಯಾಯ ಮತ್ತು ಸತ್ಯ-ಅಸತ್ಯದ ನಡುವಿನ ಹೋರಾಟವಾಗಿದೆ ಎಂದು ಉಮಾ ಹೇಳಿದರು.

ಕಾರ್ಮಿಕ ವರ್ಗದ ನಾಯಕ ಕಾರ್ಲ್‍ಮಾಕ್ರ್ಸ್ ಅವರ ‘ವಿಶ್ವದ ಕಾರ್ಮಿಕರೇ ಒಂದಾಗಿ, ನಿಮ್ಮ ಬಳಿ ಕಳೆದುಕೊಳ್ಳಲು ಸಂಕೋಲೆಗಳನ್ನು ಬಿಟ್ಟು ಬೇರೇನೂ ಉಳಿದಿಲ್ಲ' ಎಂಬ ಮಾತಿನಂತೆ ಎಲ್ಲ ಆಶಾ ಕಾರ್ಯಕರ್ತೆಯರು ತಮ್ಮ ಒಗ್ಗಟ್ಟಿನ ಹೋರಾಟವನ್ನು ಮುಂದುವರಿಸಬೇಕು. ಇತ್ತೀಚಿನ ದಿಲ್ಲಿ ಹೋರಾಟ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟ ಈ ಹೋರಾಟಕ್ಕೆ ಸ್ಫೂರ್ತಿಯಾಗಲಿ. ಆಶಾಗಳ ಹೋರಾಟ ಇತಿಹಾಸ ನಿರ್ಮಿಸಲಿ ಎಂದು ಹಾರೈಸಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಶೋಭಾ ಎಸ್. ಮಾತನಾಡಿ, ಮಾ.8ರ ಅಂತರರಾಷ್ಟ್ರೀಯ ಮಹಿಳಾ ದಿನದ ಸ್ಫೂರ್ತಿ ಆಶಾ ಕಾರ್ಯಕರ್ತೆಯರ ಹೋರಾಟದಲ್ಲಿ ಕಾಣುತ್ತಿದೆ. ಸರಕಾರ ಆಶಾಗಳ ಬೇಡಿಕೆಗಳನ್ನು ಈಡೇರಿಸದೆ ಹಠಮಾರಿ ಧೋರಣೆ ಪ್ರದರ್ಶಿಸುತ್ತಿದೆ. ಪ್ರತಿಭಟನಾಕಾರರು ಸುಸ್ತಾಗಿ ತಾವಾಗಿಯೇ ಹೋರಾಟದಿಂದ ಹಿಂದೆ ಸರಿಯುತ್ತಾರೆ ಎಂಬ ಭ್ರಮೆಯಲ್ಲಿ ಸರಕಾರ ಇರಬಾರದು. ಮಹಿಳೆ ಸಹನಾಮೂರ್ತಿಯಾಗಿರುವುದು ಎಷ್ಟು ಸತ್ಯವೋ, ಅಗತ್ಯ ಬಂದಾಗ ಪ್ರತಿರೋಧ ತೋರುವುದು ಕೂಡ ಆಕೆಯ ಶಕ್ತಿಯಾಗಿದೆ ಎಂದು ಬೆಂಬಲ ವ್ಯಕ್ತಪಡಿಸಿದರು.

ಹೋರಾಟದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಮುಖಂಡರಾದ ಟಿ.ಸಿ.ರಮಾ, ಹನುಮೇಶ್, ಗಂಗಾಧರ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮನೋಜ್ ಆಜಾದ್/ವಾರ್ತಾಭಾರತಿ

ಬೆಂಗಳೂರು ವರದಿಗಾರರು