×
Ad

ವಿಧಾನಸಭಾ ಅಧಿವೇಶನ| ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚಿಸುವಂತಿಲ್ಲ: ಶಾಸಕರಿಗೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ

Update: 2026-01-28 22:30 IST

ಬೆಂಗಳೂರು, ಜ.28: ‘ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆಯುವ ಚರ್ಚೆ ವೇಳೆ ಸದನದ ಯಾವೊಬ್ಬ ಸದಸ್ಯರು ರಾಜ್ಯಪಾಲರ ಬಗ್ಗೆಯಾಗಲಿ, ಅವರ ನಡವಳಿಕೆ ಬಗ್ಗೆಯಾಗಲಿ ಚರ್ಚಿಸುವಂತಿಲ್ಲ’ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ರೂಲಿಂಗ್ ನೀಡಿದರು.

ರಾಜ್ಯಪಾಲರಿಗೆ ಅಗೌರವ ತೋರಿರುವ ಸರಕಾರ ಕ್ಷಮೆ ಕೋರಬೇಕು ಇಲ್ಲವೇ ವಿಷಾದ ವ್ಯಕ್ತಪಡಿಸಬೇಕು ಎಂದು ಬುಧವಾರ ವಿಧಾನಸಭೆಯಲ್ಲಿ ವಿಪಕ್ಷ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ಷಮೆ ಕೋರಲು ಸದನ ಏನು ತಪ್ಪು ಮಾಡಿದೆ? ರಾಜ್ಯಪಾಲರು ರಾಷ್ಟ್ರಗೀತೆಗೆ ಅಗೌರವ ತೋರಿ ಸದನದಿಂದ ಹೊರ ನಡೆದದ್ದು ಯಾಕೆ ಎಂದು ಪ್ರಶ್ನಿಸಿದರು.

ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರ ಹೆಚ್ಚಾದ ಹಿನ್ನೆಲೆಯಲ್ಲಿ ಸದನವನ್ನು 10 ನಿಮಿಷ ಮುಂದೂಡಿದ ಸ್ಪೀಕರ್, ಸಂಧಾನ ಸಭೆಯನ್ನು ನಡೆಸಿ, ಒಮ್ಮತದ ತೀರ್ಮಾನವನ್ನು ಸದನದಲ್ಲಿ ಪ್ರಕಟಿಸಿದರು.

ರಾಜ್ಯಪಾಲರು ಜ.22ರಂದು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ಸದನದಲ್ಲಿ ನಡೆದಿರುವ ಘಟನೆಗಳು ಮತ್ತು ಚರ್ಚೆಯು ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಲು ಕಾರಣವಾಗಿದೆ ಎಂದು ಸ್ಪೀಕರ್ ತಿಳಿಸಿದರು.

ಈ ಸದನದ ಸದಸ್ಯರಾಗಿರುವ ನಮ್ಮ ನಡತೆ, ವ್ಯಕ್ತಪಡಿಸುವ ಅಭಿಪ್ರಾಯಗಳು ಸದಾಭಿರುಚಿ ಹಾಗೂ ಸಂವಿಧಾನದತ್ತವಾಗಿರಬೇಕು. ಅಲ್ಲದೇ, ಈ ಸದನದ ಘನತೆ ಹಾಗೂ ಗೌರವ ಎತ್ತಿ ಹಿಡಿಯುವಂತಾಗಿರಬೇಕು. ಈ ನಿಟ್ಟಿನಲ್ಲಿ ಸದನ ಸದಸ್ಯರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಖಾದರ್ ಹೇಳಿದರು.

ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಈ ವಿಷಯವನ್ನು ಮುಕ್ತಾಯಗೊಳಿಸಿ, ವಂದನಾ ನಿರ್ಣಯದ ಮೇಲಿನ ಚರ್ಚೆ ಮುಂದುವರೆಸುವುದು. ಚರ್ಚೆಯ ಸಂದರ್ಭದಲ್ಲಿ ರಾಜ್ಯಪಾಲರ ಬಗ್ಗೆಯಾಗಲಿ, ಅವರ ನಡವಳಿಕೆ ಬಗ್ಗೆಯಾಗಲಿ ಮಾತನಾಡಬಾರದು ಎಂದು ಸ್ಪೀಕರ್ ರೂಲಿಂಗ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News