ಬೆಂಗಳೂರು| ಅಮೆರಿಕಾ ಮೂಲದ ದಂಪತಿ ಮನೆಯಲ್ಲಿ ಕಳ್ಳತನ: ಆರೋಪಿಯ ಬಂಧನ
ಬೆಂಗಳೂರು, ಜ.28: ಅಮೆರಿಕಾ ಮೂಲದ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕಳ್ಳತನದ ಆರೋಪದಲ್ಲಿ ಜೀವನ್ ಭೀಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಚಿನ್ನಾಭರಣ ಹಾಗೂ ನಗದು ಸೇರಿದಂತೆ ಅಂದಾಜು ಒಂದು ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ಚಂದನ್ ರೌಲ್ ಬಂಧಿತ ಆರೋಪಿ.
ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದ ಅಮೆರಿಕದ ಮೆರಿಯಲ್ ಮೊರೆನೋ ದಂಪತಿ ನಗರದಲ್ಲಿರುವ ಕೋಡಿಹಳ್ಳಿಯ ರುಸ್ತುಂಭಾಗ್ ಮುಖ್ಯರಸ್ತೆಯ ವಿಲ್ಲಾವೊಂದರಲ್ಲಿ ಬಾಡಿಗೆಗೆ ವಾಸವಿದ್ದರು. ಅದೇ ಮನೆಯಲ್ಲಿ ಚಂದನ್ ರೌಲ್ ಕೆಲಸ ಮಾಡುತ್ತಿದ್ದ. ಜ.21ರಂದು ಮೆರಿಯಲ್ ಕೆಲಸಕ್ಕೆ ಹೋಗಿದ್ದಾಗ ಆರೋಪಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು.
ಕಳ್ಳತನವಾಗಿರುವುದನ್ನು ತಿಳಿದ ಮೆರಿಯಲ್ ಆ ಸಂದರ್ಭದಲ್ಲಿ ಅಮೆರಿಕಕ್ಕೆ ತೆರಳಿದ್ದ ತಮ್ಮ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಪತಿ ಭಾರತದಲ್ಲಿರುವ ಅಮೆರಿಕದ ಎಂಬೆಸ್ಸಿಯ ನೆರವಿನೊಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ದೂರು ನೀಡಿದ್ದರು. ಮೆರಿಯಲ್ ಅವರಿಂದ ದೂರು ಪಡೆದ ಜೀವನ್ ಭೀಮಾನಗರ ಠಾಣೆ ಪೊಲೀಸರು ಆರೋಪಿ ಚಂದನ್ ರೌಲ್‍ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.