ಬಿಕ್ಲು ಶಿವು ಕೊಲೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಲು ಕಾರಣವೇನು?: ಪ್ರಾಸಿಕ್ಯೂಷನ್‌ನಿಂದ ಮಾಹಿತಿ ಕೇಳಿದ ಹೈಕೋರ್ಟ್
Photo| PTI
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದ ತನಿಖೆಯನ್ನು ಭಾರತಿನಗರ ಠಾಣೆ ಪೊಲೀಸರಿಂದ ಸಿಐಡಿಗೆ ವಹಿಸುವಲ್ಲಿ ಗಂಭೀರ ಕಾರಣ ಏನು? ಎನ್ನುವುದನ್ನು ತಿಳಿಸುವಂತೆ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕರಿಗೆ ಹೈಕೋರ್ಟ್ ಸೂಚಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿತು.
ನ್ಯಾಯಾಲಯದ ಸೂಚನೆಗೆ ಪ್ರತಿಕ್ರಿಯಿಸಿದ ವಿಶೇಷ ಸರಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಸಿಐಡಿ ತನಿಖೆಗೆ ವಹಿಸಿ ಸರಕಾರ ಹೊರಡಿಸಿದ ಆದೇಶ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಕಡತವನ್ನು ಗುರುವಾರ ಒದಗಿಸಲಾಗುವುದು ಎಂದು ತಿಳಿಸಿದರು. ಅದಕ್ಕೆ ನ್ಯಾಯಪೀಠ, ಕಡತ ಸಲ್ಲಿಸಿದ ನಂತರ ಅದನ್ನು ದಾಖಲಿಸಿಕೊಂಡು ಅರ್ಜಿ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಲಾಗುವುದು ಎಂದು ತಿಳಿಸಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ಬೈರತಿ ಬಸವರಾಜ್ ಪರ ವಕೀಲರು ವಾದ ಮಂಡಿಸಿ, ಪೈ ಲೇಔಟ್ ಭೂಮಿ ಸಂಬಂಧ ಬಿಕ್ಲು ಶಿವು ಹಾಗೂ ಜಗದೀಶ್ ನಡುವೆ ವಿವಾದವಿತ್ತು. ಈ ವೇಳೆ ಜಗದೀಶ್, ಮೃತ ಬಿಕ್ಲು ಶಿವುಗೆ ಜೀವ ಬೆದರಿಕೆ ಹಾಕಿದ್ದರು. ಆ ಕುರಿತು ಶಿವು ದೂರು ದಾಖಲಿಸಿದ್ದರು. ಆರೋಪಿಗಳ ಬಂಧನವಾಗದಂತೆ ಪೊಲೀಸರೊಂದಿಗೆ ಮಾತನಾಡಿ ಅರ್ಜಿದಾರರು ರಕ್ಷಣೆ ಒದಗಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳುತ್ತಿದೆ. 2025ರ ಫೆಬ್ರವರಿ 10ರಿಂದ 13ರವರೆಗೆ ಪೈ ಲೇಔಟ್ ವ್ಯಾಜ್ಯ ನಡೆದಿದೆ. ಆ ನಡುವೆ ಶಿವು ಮತ್ತು ಜಗದೀಶ್ ಸಾಕಷ್ಟು ಭಾರಿ ಪೋನ್‌ನಲ್ಲಿ ಸಂಭಾಷಣೆ ನಡೆಸಿದ್ಧಾರೆ. ಪೈ ಲೇಔಟ್ ಹಾಗೂ ಕಿತ್ತಗನೂರು ಭೂ ವ್ಯಾಜ್ಯಕ್ಕೂ ಅರ್ಜಿದಾರರಿಗೆ ಯಾವುದೇ ಸಂಬಂಧವಿಲ್ಲ ಎಂದರು.
ಪ್ರಯಾಗ್ ರಾಜ್ ಪ್ರಯಾಣಕ್ಕೆ 2025ರ ಜಮವರಿ 18ರಂದು ಅರ್ಜಿದಾರರು ಟಿಕೆಟ್ ಕಾಯ್ದಿರಿಸಿದ್ದು, ಫೆಬ್ರವರಿ 11ರಂದು ಪ್ರಯಾಣಿಸಿದ್ದಾರೆ. ಜನವರಿ 18ರಂದು ಟಿಕೆಟ್ ಕಾಯ್ದಿಸಿರಬೇಕಾದರೆ ಕೊಲೆಗೆ ಸಂಬಂಧವಿದೆ ಎಂದು ಹೇಗೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂಬುದು ಗೊತ್ತಿಲ್ಲ. ಪ್ರಯಾಗ್ ರಾಜ್‌ಗೆ ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸಿದ್ದಾರೆ. ಅವರ ಪಿಎನ್‌ಆರ್ ಸಂಖ್ಯೆಗೂ ಜಗದೀಶ್ ಪಿಎನ್‌ಆರ್ ಸಂಖ್ಯೆಗೂ ವ್ಯತ್ಯಾಸವಿದೆ. ಆದ್ದರಿಂದ, ಒಂದೇ ಪಿಎನ್‌ಆರ್ ಸಂಖ್ಯೆಯಲ್ಲಿ ಜಗದೀಶ್ ಮತ್ತು ಅರ್ಜಿದಾರರು ಪ್ರಯಾಣಿಸಿದ್ದಾರೆ ಎಂಬ ವಾದ ಸುಳ್ಳು ಎಂದು ಪ್ರತಿಪಾದಿಸಿದರು.
ಬಿಕ್ಲು ಶಿವು ಮೇಲೆ ಅಪರಿಚಿತ ದಾಳಿಕೋರರು ದಾಳಿ ನಡೆಸಿದ್ದಾರೆ ಎಂದು ಮೃತನ ತಾಯಿ ಮೊದಲಿಗೆ ಹೇಳುತ್ತಾರೆ. ನಂತರ ಯಾರದೋ ಮಾತಿಗೂ ಕಿವಿಗೊಟ್ಟು ಬಸವರಾಜ್ ಹೆಸರು ಹೇಳಿದ್ದಾರೆ. ನಂತರ ತಮ್ಮ ಹೇಳಿಕೆ ಹಿಂಪಡೆದುಕೊಂಡಿದ್ದಾರೆ. ಅವರ ಹೇಳಿಕೆಯೇ ಅನುಮಾನಸ್ಪದವಾಗಿದೆ. ಅಂತಹವರನ್ನು ಸಿಐಡಿ ಪ್ರಧಾನ ಸಾಕ್ಷ್ಯ ಎಂದು ಹೇಳುತ್ತಿದೆ. ಇನ್ನು ಅರ್ಜಿದಾರರು ತನಿಖೆಗೆ ಸಹಕರಿಸಿಲ್ಲ ಎಂದು ಆರೋಪಿಸಲಾಗುತ್ತಿದೆ. ಭಾರತಿನಗರ ಠಾಣೆ ಪೊಲೀಸರ ತನಿಖೆ ನಡೆಸುವಾಗ ಎಸಿಪಿಯೇ ಬಸವರಾಜ್ ಅವರನ್ನು ವಿಚಾರಣೆ ನಡೆಸಿದ್ದರು. ಎಸಿಪಿ ಕೇಳಿದ್ದ 150 ಪ್ರಶ್ನೆಗಳಿಗೆ ಬಸವರಾಜ್ ಉತ್ತರಿಸಿದ್ದಾರೆ. ಸಿಐಡಿಗೆ ವರ್ಗಾವಣೆಯಾದ ನಂತರ ತನಿಖಾಧಿಕಾರಿಗಳು ಒಮ್ಮೆಯೂ ಅರ್ಜಿದಾರರನ್ನು ವಿಚಾರಣೆಗೆ ಕರೆದಿಲ್ಲ ಎಂದರು.
ಪ್ರಕರಣದ 18 ಆರೋಪಿಗಳ ದೋಷಾರೋಷ ಪಟ್ಟಿ ಸಲ್ಲಿಸಿದ್ದರೂ ಅರ್ಜಿದಾರ ವಿರುದ್ಧದ ಮಾತ್ರ ತನಿಖೆ ನಡೆಸಬೇಕಿದೆ. ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ ಎಂದು ಸಿಐಡಿ ಪೊಲಿಸರು ಹೇಳುತ್ತಿದ್ದಾರೆ. ಅರ್ಜಿದಾರರು ಪ್ರಕರಣದಲ್ಲಿ ಭಾಗವಹಿಸಿಲ್ಲ. ಹಾಗೊಂದು ವೇಳೆ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾದರೆ, ನ್ಯಾಯಾಲಯ ಅಗತ್ಯ ಷರತ್ತುಗಳನ್ನು ವಿಧಿಸಬಹುದು. ಆ ಷರತ್ತುಗಳನ್ನು ಅರ್ಜಿದಾರರು ಪಾಲಿಸಲಿದ್ದಾರೆ ಎಂದು ಭರವಸೆ ನೀಡಿದರು.