ತಂತ್ರಜ್ಞಾನದ ವಿವೇಕ ಕನ್ನಡಕ್ಕೆ ಬಾರದ ಕಾರಣಕ್ಕೆ ಕಂದರ ಸೃಷ್ಠಿ: ಡಾ.ಪುರುಷೋತ್ತಮ ಬಿಳಿಮಲೆ
ಪ್ರೊ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು, ಜ.28: ತಂತ್ರಜ್ಞಾನದ ವಿವೇಕವು ಇಲ್ಲಿಯವರೆಗೆ ಕನ್ನಡಕ್ಕೆ ಸಮರ್ಪಕವಾಗಿ ಬಾರದ ಕಾರಣ ಸೃಷ್ಠಿಯಾಗಿರುವ ಬಹುದೊಡ್ಡ ಕಂದರವು, ಸಾಮಾನ್ಯ ಕನ್ನಡಿಗರನ್ನು ಕನ್ನಡದ ನೆಲದಲ್ಲಿಯೇ ಪರಕೀಯರನ್ನಾಗಿಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಬುಧವಾರ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯದಲ್ಲಿ ‘ಕನ್ನಡ ಅನುಷ್ಠಾನ ಪ್ರಗತಿ’ ಪರಿಶೀಲನೆ ನಡೆಸಿ ಮಾತನಾಡಿದ ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಭಾಷೆಯನ್ನು ಕೇವಲ ಸಾಹಿತ್ಯಿಕ ಆಯಾಮದಿಂದ ಗ್ರಹಿಸದೇ ಅದಕ್ಕೆ ಇತರ ಆಯಾಮಗಳೂ ಇವೆ ಎಂದು ಭಾವಿಸಿದಾಗ ಅದು ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆಯನ್ನು ಹೊಂದುತ್ತದೆ ಎಂದರು.
ಜ್ಞಾನದ ಅಂತರ್‍ರಾಷ್ಟ್ರೀಕರಣದ ಇಂದಿನ ಸಂದರ್ಭದಲ್ಲಿ ಆರೋಗ್ಯ, ತಂತ್ರಜ್ಞಾನ, ಕೃಷಿ ಸೇರಿದಂತೆ ಕನ್ನಡಕ್ಕೆ ಇರುವ ಬಹು ಆಯಾಮಗಳನ್ನು ಗುರುತಿಸಿಕೊಂಡು ನಮ್ಮ ವಿವೇಕ ವೃದ್ಧಿಗೆ ಕ್ರಮವಹಿಸಬೇಕಾಗುತ್ತದೆ. ಆಗ ಕನ್ನಡ ಭಾಷೆ ತನ್ನ ಸಮಗ್ರತೆಯನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ರಾಜೀವ್‍ಗಾಂಧಿ ವಿಶ್ವವಿದ್ಯಾಲಯವು ಜನ-ಸಾಮಾನ್ಯರು ಮತ್ತು ಜ್ಞಾನದ ನಡುವಿನ ಕಂದರವನ್ನು ಕಿರಿದಾಗಿಸಲು ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯವನ್ನು ಅಭಿವೃದ್ಧಿಪಡಿಸಲು ಹೆಚ್ಚು ಗಮನ ಹರಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಅಲ್ಲಿನ ಸವಾಲುಗಳು, ಸಾಮಾನ್ಯ ರೋಗಗಳ ಬಗ್ಗೆ ಜನರಿಗೆ ಸಾಮಾನ್ಯ ತಿಳುವಳಿಕೆಯನ್ನು ಒದಗಿಸುವ ಮಾದರಿಯಲ್ಲಿ ಹಾಗೂ ಹೊಸ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕುರಿತಂತೆ ಕನ್ನಡದಲ್ಲಿ ಪುಸ್ತಕಗಳನ್ನು ಹೊರತರುವಲ್ಲಿ ಗಮನ ಹರಿಸಬೇಕು ಎಂದರು.
ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಸಹ ಈ ಸಾಹಿತ್ಯ ಸೃಷ್ಠಿಗೆ ಕೈ ಜೋಡಿಸುವಂತೆ ವಿಶ್ವವಿದ್ಯಾಲಯವು ಗಮನ ಹರಿಸುವುದು ಮುಖ್ಯ. ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನವನ್ನು ನೀಡಲು ಸಹ ವಿಶ್ವವಿದ್ಯಾಲಯ ಆಲೋಚಿಸಬಹುದು ಎಂದು ತಿಳಿಸಿದರು.
ಆರೋಗ್ಯ ವಿಶ್ವವಿದ್ಯಾಲಯದ ಲಾಂಛನದಲ್ಲಿ ಕನ್ನಡಕ್ಕೆ 2ನೇ ಸ್ಥಾನವನ್ನು ನೀಡಿರುವುದು ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕದ ಪ್ರಕಾರ ಸರಿಯಾದ ಕ್ರಮವಲ್ಲ. ಕೂಡಲೇ ಈ ವಿಷಯವನ್ನು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ವಿಶ್ವವಿದ್ಯಾಲಯದ ಲಾಂಛನದಲ್ಲಿ ಕನ್ನಡಕ್ಕೆ ಮೊದಲ ಸ್ಥಾನವನ್ನು ನೀಡಬೇಕು ಎಂದು ಸೂಚಿಸಿದರು.
ಕನ್ನಡೇತರ ವಿದ್ಯಾರ್ಥಿಗಳಿಗೆ ಬಳಕೆ ಕನ್ನಡ ಪಠ್ಯವನ್ನು ನಿಗದಿಪಡಿಸಲಾಗಿದ್ದು, ಅಂಕಗಳಿಕೆಗೆ ಇದನ್ನು ಪರಿಗಣಿಸದ ಕಾರಣ ಕನ್ನಡ ಕಲಿಯುವಿಕೆಯಲ್ಲಿ ಗಂಭೀರತೆಯನ್ನು ತರಲಾಗುತ್ತಿಲ್ಲ, ಕನ್ನಡೇತರ ವಿದ್ಯಾರ್ಥಿಗಳು ಇದನ್ನು ಕಲಿತು ಪರೀಕ್ಷೆಯಲ್ಲಿ ತೇರ್ಗಡೆ ಅಂಕಗಳನ್ನು ಗಳಿಸುವುದು ಕಡ್ಡಾಯ ಮಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಆಲೋಚಿಸಬೇಕು. ವಿಶ್ವವಿದ್ಯಾಲಯದಲ್ಲಿ ಅಧಿಕಾರಿ-ಸಿಬ್ಬಂದಿಯನ್ನೊಳಗೊಂಡ ಕನ್ನಡ ಘಟಕಗಳನ್ನು ಸ್ಥಾಪಿಸಬೇಕು. ಜಾಲತಾಣದಲ್ಲಿ ಕನ್ನಡ ಭಾಷೆ ಆಯ್ಕೆ ಆಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ.ಭಗವಾನ್ ಬಿ.ಸಿ., ಕುಲಸಚಿವ ಸಿ. ಅರ್ಜುನ್ ಒಡೆಯರ್, ಕುಲಸಚಿವ (ಮೌಲ್ಯಮಾಪನ) ಡಾ.ರಿಯಾಝ್ ಬಾಷಾ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ, ಆಪ್ತ ಕಾರ್ಯದರ್ಶಿ ಟಿ.ಎಸ್.ಫಣಿಕುಮಾರ್, ವೈದ್ಯ ಡಾ.ಸಿ.ಎ. ಕಿಶೋರ್ ಮತ್ತಿತರರು ಹಾಜರಿದ್ದರು.