×
Ad

ಡಾ.ರೊನಾಲ್ಡ್ ಕೊಲಾಸೊರಿಗೆ ಕರ್ನಾಟಕ ಡಿಜಿಪಿಯಿಂದ ವಿಶೇಷ ಸನ್ಮಾನ

Update: 2026-01-28 21:04 IST

ಬೆಂಗಳೂರು: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಕೊಡುಗೈ ದಾನಿ ಡಾ.ರೊನಾಲ್ಡ್ ಕೊಲಾಸೊ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಡಾ. ಎಂ.ಎ. ಸಲೀಂ ಅವರು ಇತ್ತೀಚೆಗೆ 'ವಿಶೇಷ ಗೌರವ' ನೀಡಿ ಸನ್ಮಾನಿಸಿದರು.

ಮಾದರಿ ಸಮಾಜ ಸೇವೆ, ಪೊಲೀಸ್ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಉತ್ತೇಜಿಸಲು ನೀಡಿದ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ಈ ಗೌರವ ನೀಡಲಾಗಿದೆ.


ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಡಾ.ಕೊಲಾಸೊ ಅವರಿಗೆ 'ಕರ್ನಾಟಕ ಪೊಲೀಸ್ ಯುನಿಕ್ ಅಫೀಶಿಯಲ್ ಮೆಮೆಂಟೊ' ಮತ್ತು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದರು. ರಾಜ್ಯಾದ್ಯಂತ ಉನ್ನತ ಮಟ್ಟದ ಪೊಲೀಸ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಡಾ.ಕೊಲಾಸೊ ನೀಡುತ್ತಿರುವ ನಿರಂತರ ಬೆಂಬಲವನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು.


ಮಾಜಿ ಪೊಲೀಸ್ ಮುಖ್ಯಸ್ಥರಿಂದಲೂ ಶ್ಲಾಘನೆ

ಇದಕ್ಕೂ ಮೊದಲು, ನಿಕಟಪೂರ್ವ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಕೂಡ ಡಾ. ಕೊಲಾಸೊ ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಗೌರವಿಸಿದ್ದರು. ಕೋಮು ಸೌಹಾರ್ದ ಉತ್ತೇಜಿಸಲು ಮತ್ತು ಪೊಲೀಸ್ ಇಲಾಖೆಯ ಉನ್ನತೀಕರಣಕ್ಕೆ ಡಾ.ಕೊಲಾಸೊ ನೀಡಿರುವ ಅಗಾಧ ಕೊಡುಗೆಯನ್ನು ಪ್ರಶಂಸನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಪೊಲೀಸ್ ಇಲಾಖೆಗೆ ಡಾ.ಕೊಲಾಸೊ ನೀಡಿದ ಪ್ರಮುಖ ಕೊಡುಗೆಗಳು

ಕರ್ನಾಟಕ ಪೊಲೀಸ್ ಇಲಾಖೆ ಜೊತೆ ಡಾ.ರೊನಾಲ್ಡ್ ಕೊಲಾಸೊ ಅವರ ಸಂಬಂಧ 2003ರಿಂದ ಆರಂಭವಾಗಿದೆ. ಅಂದಿನ ಬೆಂಗಳೂರು ಪೊಲೀಸ್ ಮುಖ್ಯಸ್ಥರಾಗಿದ್ದ ಮರಿಸ್ವಾಮಿ ಅವರು ಫ್ರೇಝರ್ ಟೌನ್ (ಇಂದಿನ ಪುಲಿಕೇಶಿನಗರ) ಪೊಲೀಸ್ ಠಾಣೆಯನ್ನು ನವೀಕರಣ ಮಾಡುವಂತೆ ಡಾ. ಕೊಲಾಸೊ ಅವರನ್ನು ವಿನಂತಿಸಿದ್ದರು. ಈ ವೇಳೆ ಆಧುನಿಕ ಸೌಲಭ್ಯಗಳೊಂದಿಗೆ ಪೊಲೀಸ್ ಠಾಣೆಯನ್ನು ವಿನ್ಯಾಸಗೊಳಿಸಿ ಮಾದರಿ ಠಾಣೆಯಾಗಿ ನಿರ್ಮಿಸುವ ಇಚ್ಛೆಯನ್ನು ಡಾ.ಕೊಲಾಸೊ ವ್ಯಕ್ತಪಡಿಸಿದ್ದರು.


ಕೊಟ್ಟ ಮಾತಿನಂತೆ ಅವರು ಫ್ರೇಝರ್ ಟೌನ್ನಲ್ಲಿ 5,000 ಚದರ ಅಡಿಗಳ ವಿಸ್ತೀರ್ಣದ ಅತ್ಯಾಧುನಿಕ ಪೊಲೀಸ್ ಠಾಣೆಯನ್ನು ನಿರ್ಮಿಸಿದ್ದರು. ಇದು ದೇಶದಲ್ಲೇ ಅತ್ಯಂತ ವಿಶಿಷ್ಟ ಸಾಮಾಜಿಕ ಸೇವೆಯೆಂದು ಪರಿಗಣಿಸಲ್ಪಟ್ಟಿತ್ತು. 2004ರಲ್ಲಿ ಡಾ.ಕೊಲಾಸೊ ಅವರು ಫ್ರೇಝರ್ ಟೌನ್ನಲ್ಲಿ 3,000 ಚದರ ಅಡಿ ವಿಸ್ತೀರ್ಣದ ಹಿಂದಿನ ಪೊಲೀಸ್ ಠಾಣೆಯನ್ನು ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆಯಾಗಿ ಪುನರ್ ನಿರ್ಮಿಸಿದ್ದರು.


ಡಾ. ಕೊಲಾಸೊ ಅವರಿಂದ ಪ್ರೇರಿತಗೊಂಡು, ಇನ್ಫೋಸಿಸ್, ವಿಪ್ರೋ, ಜಿಂದಾಲ್ ಸೇರಿದಂತೆ ಅನೇಕ ಪ್ರಮುಖ ಕಾರ್ಪೊರೇಟ್ ಹಾಗೂ ಎಂಎನ್ಸಿ ಸಂಸ್ಥೆಗಳು ಮುಂದೆ ಬಂದು ರಾಜ್ಯಾದ್ಯಂತ 49ಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ನಿರ್ಮಿಸಿವೆ.


2021ರಲ್ಲಿ ಡಾ. ಕೊಲಾಸೊ ಅವರು ಫ್ರೇಝರ್ ಟೌನ್ನಲ್ಲಿ ಪೊಲೀಸ್ ಮ್ಯೂಸಿಯಂನ್ನೂ ನಿರ್ಮಿಸಿದರು. ಈ ಮ್ಯೂಸಿಯಂನ ಅಧಿಕೃತ ಉದ್ಘಾಟನೆ ಇನ್ನೂ ಬಾಕಿಯಿದ್ದು, ಈ ವರ್ಷಾಂತ್ಯದಲ್ಲಿ ನಡೆಯುವ ನಿರೀಕ್ಷೆಯಿದೆ.


ಡಾ. ಕೊಲಾಸೊ ಅವರ ಕೊಡುಗೆ ಬೆಂಗಳೂರಿನಾಚೆಗೂ ವಿಸ್ತರಿಸಿದೆ. 2006 ರಲ್ಲಿ ಅವರು ಚಿಕ್ಕಜಾಲ ಪೊಲೀಸ್ ಠಾಣೆಗೆ ಪೀಠೋಪಕರಣಗಳು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದ್ದರು.

ಡಾ. ಕೊಲಾಸೊ ಅವರ ನೆರವು ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗಿರಲಿಲ್ಲ. 2006ರಲ್ಲಿ ಅವರು ಚಿಕ್ಕಜಾಲ ಪೊಲೀಸ್ ಠಾಣೆಗೆ ಅಗತ್ಯ ಫರ್ನಿಚರ್ ಮತ್ತು ಮೂಲಸೌಕರ್ಯವನ್ನು ಒದಗಿಸಿದ್ದರು.

ಇದಲ್ಲದೆ, ಅಚ್ಯುತ ರಾವ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ಮೆಸ್(Police Officers’ Mess) ನಲ್ಲಿ ಆಧುನಿಕ ಆಧುನಿಕ ಡ್ರಾಯಿಂಗ್ ರೂಮ್ ನಿರ್ಮಾಣಕ್ಕೂ ಅವರು ಸಹಕಾರ ನೀಡಿದ್ದರು.


ಮಂಗಳೂರು ನಗರಕ್ಕೂ ಡಾ. ಕೊಲಾಸೊ ಅವರ ಕೊಡುಗೆ ಮಹತ್ವದ್ದಾಗಿದೆ. ಪಶ್ಚಿಮ ವಲಯದ ಐಜಿಪಿಯಾಗಿ ಡಾ.ಅಲೋಕ್ ಮೋಹನ್ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಮಂಗಳೂರು ಐಜಿಪಿ ಕಚೇರಿಯ ನವೀಕರಣಕ್ಕೆ ಅವರು ನೆರವು ನೀಡಿದರು.

ನಂತರ ಸೀಮಂತ್ ಕುಮಾರ್ ಸಿಂಗ್ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅವಧಿಯಲ್ಲಿ, ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿವೇತನ ಯೋಜನೆಗಳನ್ನು ಡಾ.ಕೊಲಾಸೊ ಆರಂಭಿಸಿದರು.


2010 ಮತ್ತು 2011ರಲ್ಲಿ 26 ಲಕ್ಷ ರೂ. ಮೌಲ್ಯದ ವಿದ್ಯಾರ್ಥಿವೇತನ ಹಾಗೂ 8 ಲಕ್ಷ ರೂ. ಮೌಲ್ಯದ ಯೂನಿಫಾರ್ಮ್ ಮತ್ತು ಶಾಲಾ ಚೀಲಗಳನ್ನು 550ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಿಸಿದರು. ಡಾ. ರೊನಾಲ್ಡ್ ಕೊಲಾಸೊ ಅವರ ಪುತ್ರ ನೈಜಲ್ ಕೊಲಾಸೊ ಅವರು ಕೂಡ ಒಂದು ವರ್ಷದ ವಿದ್ಯಾರ್ಥಿ ವೇತನವನ್ನು ನೀಡಿದ್ದರು.


ಪೊಲೀಸ್ ಇಲಾಖೆಗೆ ಮೂಲಸೌಕರ್ಯದ ಹೊರತಾಗಿ, ಡಾ. ಕೊಲಾಸೊ ಅವರು ವಿವಿಧ ಸರಕಾರಿ ಸಂಸ್ಥೆಗಳ ನಿರ್ಮಾಣ, ಅಭಿವೃದ್ಧಿ ಮತ್ತು ನವೀಕರಣಕ್ಕೆ ಗಮನಾರ್ಹ ಬೆಂಬಲವನ್ನು ನೀಡಿದ್ದಾರೆ. 25ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಿಗೆ ಕಳೆದ ಮೂರೂವರೆ ದಶಕಗಳಿಂದ ಧಾರಾಳ ಕೊಡುಗೆಯನ್ನು ನೀಡಿದ್ದಾರೆ.

ಶಿಕ್ಷಣ, ಆರೋಗ್ಯ ಸೇವೆ, ತೋಟಗಾರಿಕೆ, ಬೆಸ್ಕಾಂ, ಮೆಸ್ಕಾಂ, ಕಲೆ ಮತ್ತು ಸಂಸ್ಕೃತಿ, ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ ಸಾರ್ವಜನಿಕ ರಸ್ತೆ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ಕ್ರೀಡೆ, ರಾಷ್ಟ್ರೀಯ ವಿಪತ್ತು ನಿರ್ವಹಣೆ, ಗ್ರಾಮೀಣ ಕುಡಿಯುವ ನೀರಿನ ಸೌಲಭ್ಯ, ಸಾಮೂಹಿಕ ವಿವಾಹಗಳು, ಬಡವರ ಮನೆ ನಿರ್ಮಾಣ, ದೇವಸ್ಥಾನಗಳು, ಮಸೀದಿಗಳು, ಚರ್ಚುಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.


ಡಾ ರೊನಾಲ್ಡ್ ಕೊಲಾಸೊ ಅವರ ಅಸಾಮಾನ್ಯ ಸೇವಾ ಕಾರ್ಯಗಳನ್ನು ಗುರುತಿಸಿ ಬ್ರಿಟಿಷ್ ಸಂಸತ್ತಿನಲ್ಲಿ ಅವರನ್ನು ಗೌರವಿಸಲಾಗಿದೆ. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅವರ ಸೇವಾ ಸರಣಿಯನ್ನು ದಾಖಲಿಸಲಾಗಿದೆ. ಅಮೇರಿಕ ಅಧ್ಯಕ್ಷರ ಔತಣಕೂಟಕ್ಕೆ ಅವರ ಕುಟುಂಬಕ್ಕೆ ಆಹ್ವಾನ ನೀಡಿ ಗೌರವಿಸಲಾಗಿದೆ.

























Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News