ಬೆಂಗಳೂರು | ನಿರ್ಮಾಣ ಹಂತದ ಕಟ್ಟಡದಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ!
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಅ.4 : ನಿರ್ಮಾಣ ಹಂತದ ಕಟ್ಟಡದಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾದ ಘಟನೆ ನಗರದ ಕೊತ್ತನೂರು ಬಳಿಯ ಅಪಾರ್ಟ್‍ಮೆಂಟ್‌ವೊಂದರಲ್ಲಿ ನಡೆದಿದೆ.
ಅ.2ರ ಗುರುವಾರ ಸಂಜೆ ಈ ಅಸ್ಥಿಪಂಜರ ಪತ್ತೆಯಾಗಿದ್ದು, 6-7 ತಿಂಗಳ ಹಿಂದೆ ಮೃತಪಟ್ಟಿರಬಹುದಾದ ಸುಮಾರು 35 ರಿಂದ 40 ವರ್ಷ ವಯಸ್ಸಿನ ಪುರುಷ ಅಸ್ಥಿಪಂಜರವೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಕೊತ್ತನೂರು ಠಾಣೆ ಪೊಲೀಸರು, ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳ(ಸೋಕೋ) ತಂಡದ ಸಿಬ್ಬಂದಿ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ದೊಡ್ಡಗುಬ್ಬಿಯ ನಿವಾಸಿ ಶ್ರೀಧರ್ ಎಂಬುವರ ಒಡೆತನದ ಅಪಾರ್ಟ್‍ಮೆಂಟ್ ಕಾಮಗಾರಿ ಕುರಿತು 10 ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು. ಆದ್ದರಿಂದ ಅಪಾರ್ಟ್‍ಮೆಂಟ್ ಕಾಮಗಾರಿ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ವ್ಯಾಜ್ಯ ಬಗೆಹರಿದ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ಕಟ್ಟಡ ಶುಚಿಗೊಳಿಸುವ ಕೆಲಸವನ್ನು ಆರಂಭಿಸಲಾಗಿತ್ತು.
ಗುರುವಾರ ಸಂಜೆ ಕಟ್ಟಡದ ನಾಲ್ಕನೇ ಮಹಡಿಯನ್ನು ಶುಚಿಗೊಳಿಸುತ್ತಿದ್ದ ಕಾರ್ಮಿಕರು ಅಸ್ಥಿಪಂಜರವನ್ನು ಗಮನಿಸಿದ್ದಾರೆ. ಕೂಡಲೇ ಅಪಾರ್ಟ್‍ಮೆಂಟ್‍ನ ಭದ್ರತಾ ಸಿಬ್ಬಂದಿ ಕೊತ್ತನೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಕೊತ್ತನೂರು ಠಾಣೆ ಪೊಲೀಸರು, ಸೋಕೋ ತಂಡ ಸಿಬ್ಬಂದಿಯೊಂದಿಗೆ ಪರಿಶೀಲಿಸಿದ್ದು, ಸದ್ಯ ಅಸ್ಥಿಪಂಜರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.