ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ; ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ
ಬೆಂಗಳೂರು : ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲವನ್ನೂ ಸಹಿಸಲಾಗದು ಎಂದು ತೀಕ್ಷ್ಣವಾಗಿ ನುಡಿದಿರುವ ಹೈಕೋರ್ಟ್, 'ಭಜರಂಗಿ ಗೋ ಕಳ್ಳರು' ಎಂಬ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಿಂದೂ ದೇವತೆಗಳು ಮತ್ತು ರಾಜಕೀಯ ನಾಯಕರನ್ನು ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಪ್ರಕರಣ ರದ್ದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಕರಯಾ ಗ್ರಾಮದ ಸಿರಾಜುದ್ದೀನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಹೈಕೋರ್ಟ್ ಆದೇಶವೇನು?
ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಪ್ರವೃತ್ತಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಮತ್ತು ತನಿಖಾಧಿಕಾರಿಯು ಗ್ರೂಪ್‌ನ ಎಲ್ಲ ನಿರ್ವಾಹಕರ (ಅಡ್ಮಿನ್) ವಿರುದ್ಧ ಏಕರೂಪವಾಗಿ ಮುಂದುವರಿಯಲು ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ. ಇಂಥ ವಾಟ್ಸ್‌ಆ್ಯಪ್ ಗ್ರೂಪ್‌ನ ಸದಸ್ಯರೂ ಅಶ್ಲೀಲ ಚಿತ್ರಗಳ ಪ್ರಸರಣಕ್ಕೆ ಅವಕಾಶ ನೀಡುವ ಕೃತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆ, ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣವಿನ್ನೂ ತನಿಖಾ ಹಂತದಲ್ಲಿದ್ದು, ತನಿಖೆಯಿಂದ ಯಾವ ವಿಚಾರಗಳು ಹೊರಬರಲಿವೆ ಎಂದು ಇನ್ನೂ ತಿಳಿಯಬೇಕಿದೆ. ಈ ರೀತಿಯ ಗುರುತರ ಗುಣಲಕ್ಷಣಗಳ ಅಪರಾಧದ ತನಿಖೆಯನ್ನು ಮಧ್ಯದಲ್ಲೇ ತಡೆಯಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ. ಇದೇ ವೇಳೆ, ಇದು 2021ರ ಅಪರಾಧ ಕೃತ್ಯವಾಗಿರುವ ಕಾರಣ ತನಿಖಾಧಿಕಾರಿ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಶೀಘ್ರ ತನಿಖೆ ಮುಕ್ತಾಯಗೊಳಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.