ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆಗೆ ಎಂಎನ್‍ಸಿ ಮುಖ್ಯಸ್ಥರು ಒಲವು : ಎಂ.ಬಿ.ಪಾಟೀಲ್
ಬೆಂಗಳೂರು : ದಾವೋಸ್‍ನ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶವು ಉತ್ತಮ ಭೂಮಿಕೆ ಸಿದ್ಧಪಡಿದ್ದು, ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ, ವಿಸ್ತರಣೆಯ ವಾಗ್ದಾನಗಳನ್ನು ಆದ್ಯತೆ ಮೇರೆಗೆ ಕಾರ್ಯಗತಗೊಳಿಸಲು ಬಹುರಾಷ್ಟ್ರೀಯ ಕಂಪೆನಿಗಳ ಮುಖ್ಯಸ್ಥರು ಒಲವು ತೋರಿಸಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ದಾವೋಸ್‍ನ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಆದ ಸಭೆ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಾಧುನಿಕ ತಯಾರಿಕೆ, ಆಹಾರ ಸಂಸ್ಕರಣೆ, ಶುದ್ಧ ಇಂಧನ, ಡೇಟಾ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಹೊಸ ಬಂಡವಾಳ ಹೂಡಿಕೆ, ಉದ್ಯಮ ವಿಸ್ತರಣೆ ಮತ್ತು ಪಾಲುದಾರಿಕೆಗಳು ತ್ವರಿತವಾಗಿ ಸಾಕಾರಗೊಳ್ಳಲು ದಾವೋಸ್‍ನ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶವು ಉತ್ತಮ ಭೂಮಿಕೆ ಸಿದ್ಧಪಡಿಸಿದೆ ಎಂದರು.
ಏರೊಸ್ಪೇಸ್, ಡಿಫೆನ್ಸ್, ಅಡ್ವಾನ್ಸ್ ಮ್ಯಾನುಫ್ಯಾಕ್ಚರಿಂಗ್, ಪಾನೀಯಗಳು ಮತ್ತು ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ, ಜೀವ ವಿಜ್ಞಾನ, ಡೇಟಾ ಸೆಂಟರ್‍ಗಳು, ಡಿಜಿಟಲ್ ಮೂಲಸೌಲಭ್ಯ ಮತ್ತು ಶುದ್ಧ ಇಂಧನ ಮುಂತಾದ ಆದ್ಯತಾ ವಲಯಗಳಲ್ಲಿನ 25ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪೆನಿಗಳು ಮತ್ತು 15ಕ್ಕೂ ಹೆಚ್ಚು ಭಾರತದ ಕಂಪೆನಿಗಳ ಜೊತೆಗೆ ಫಲಪ್ರದ ಸಭೆ ನಡೆಸಲಾಗಿದೆ. ಜತೆಗೆ, ದೇಶದ ಕೈಗಾರಿಕಾ ಭೂಪಟದಲ್ಲಿ ಕರ್ನಾಟಕವನ್ನು ಮುಂಚೂಣಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉದ್ಯಮ ಸ್ನೇಹಿ ಕೈಗಾರಿಕಾ ನೀತಿ ಅಳವಡಿಸಿಕೊಂಡಿರುವ ಸರಕಾರದ ಕ್ರಮವನ್ನು ಉದ್ಯಮ ದಿಗ್ಗಜರು ಶ್ಲಾಘಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಜಾಗತಿಕ ಆರ್ಥಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರತದ ಬದಲಾಗುತ್ತಿರುವ ಪಾತ್ರದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ರಾಜ್ಯದ 2 ಮತ್ತು 3ನೆ ಶ್ರೇಣಿಯ ನಗರಗಳಲ್ಲಿ ಹೂಡಿಕೆ ಹಾಗೂ ವಿಸ್ತರಣೆ ಬಗ್ಗೆ ಹಲವು ಕಂಪೆನಿಗಳು ಒಲವು ವ್ಯಕ್ತಪಡಿಸಿವೆ. ಅದರಲ್ಲೂ, ಬೆಂಗಳೂರು ಆಚೆಗಿನ ನಗರಗಳು ಸ್ವಯಂ ಸುಸ್ಥಿರ ನಗರಗಳಾಗಿ ಬೆಳೆಯುವುದಕ್ಕೆ ರಾಜ್ಯ ಸರಕಾರ ನೀಡುತ್ತಿರುವ ಆದ್ಯತೆಗೆ ಪೂರಕವಾಗಿ, ರಾಜ್ಯದಲ್ಲಿನ 2ನೆ ಸ್ಥರದ ನಗರಗಳಲ್ಲಿ ವಿಸ್ತರಣೆಗೆ ಟೆಕ್ ಮಹೀಂದ್ರಾ, ಡೇಟಾ ಕೇಂದ್ರಗಳನ್ನು ಸ್ಥಾಪಿಸಲು ಭಾರ್ತಿ ಎಂಟರ್‍ಪ್ರೈಸಸ್ ಮತ್ತು ಸಿಫಿ ಟೆಕ್ನಾಲಜೀಸ್ ಆಸಕ್ತಿ ತೋರಿಸಿವೆ ಎಂದೂ ಅವರು ಉಲ್ಲೇಖಿಸಿದರು.
ಕೃತಕ ಬುದ್ಧಿಮತ್ತೆ (ಎಐ), ಡೇಟಾ ಸೆಂಟರ್‍ಗಳು, ಸೆಮಿಕಂಡಕ್ಟರ್‍ಗಳು, ಸ್ಪೇಸ್ ಟೆಕ್, ಇಂಡಸ್ಟ್ರಿ 4.0, ಒಳಗೊಂಡಂತೆ ಹೊಸ ತಲೆಮಾರಿನ ಕೈಗಾರಿಕೆಗಳಿಗೆ ರಾಜ್ಯವನ್ನು ಆದ್ಯತೆಯ ತಾಣವನ್ನಾಗಿ ಜಾಗತಿಕ ಹೂಡಿಕೆದಾರರು ಮತ್ತು ತಂತ್ರಜ್ಞಾನ ದಿಗ್ಗಜರಿಗೆ ಮನದಟ್ಟು ಮಾಡಿಕೊಡಲಾಗಿದೆ ಎಂದ ಅವರು, ಎಐ, ರೋಬೊಟಿಕ್ಸ್, ಕ್ವಾಂಟಂ ಮತ್ತಿತರ ಭವಿಷ್ಯದ ತಂತ್ರಜ್ಞಾನಗಳು ಒಡ್ಡಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಇರುವುದು ದಾವೋಸ್ ಭೇಟಿಯಲ್ಲಿ ಹೆಚ್ಚು ಮನದಟ್ಟಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯಪ್ರವೃತ್ತವಾಗಲಿದೆ ಎಂದು ಸಚಿವರು ತಿಳಿಸಿದರು.
ಸಮಾವೇಶದಲ್ಲಿ ದೇಶಿ ಉದ್ಯಮಗಳ ಜೊತೆ ಯಾವುದೇ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಬಾರದು ಎಂದು ಪ್ರಜ್ಞಾಪೂರ್ವಕ ನಿರ್ಧಾರಕ್ಕೆ ಬರಲಾಗಿತ್ತು. ಬದಲಿಗೆ ಭವಿಷ್ಯದ ಹೂಡಿಕೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ. ನಮ್ಮ ದೇಶದ ಕಂಪೆನಿಗಳ ಜತೆ ದಾವೋಸ್‍ಗೆ ಹೋಗಿ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯ ಏನಿದೆ? ಇಲ್ಲೇ ಮಾಡಿಕೊಳ್ಳಬಹುದು ಎನ್ನುವುದು ಸರಕಾರದ ಪ್ರಜ್ಞಾಪೂರ್ವಕ ತೀರ್ಮಾನ. ಇದಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಯಿತು. ಇದರ ನಡುವೆ ಹೂಡಿಕೆ, ಕೈಗಾರಿಕಾ ಚಟುವಟಿಕೆ, ಡೇಟಾ ಸೆಂಟರ್‍ಗಳ ವಿಸ್ತರಣೆಗೆ ಸಂಬಂಧಿಸಿದಂತೆ ದೇಶದ 15 ಬಹುರಾಷ್ಟ್ರೀಯ ಕಂಪೆನಿಗಳ ಜೊತೆಗೂ ಮಾತುಕತೆ ನಡೆಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ರಾಜ್ಯದ ಮಹತ್ವಕಾಂಕ್ಷೆಯ ‘ಕ್ವಿನ್ ಸಿಟಿʼ ಯೋಜನೆಯ ಭಾಗವಾಗುವುದಕ್ಕೆ ಟಾಟಾ ಸನ್ಸ್ ಆಸಕ್ತಿ ವ್ಯಕ್ತಪಡಿಸಿದೆ. ಈ ಸಂಬಂಧ ಮಾತುಕತೆ ಮುಂದುವರೆಸಲು ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಒಲವು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೃಹತ್ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ಬಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಇನ್ವೆಸ್ಟ್ ಕರ್ನಾಟಕ ಫೋರಂ ಸಿಇಒ ಜೋತ್ಸ್ನಾ, ಕೆಐಎಡಿಬಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಪ್ರಮುಖರಿದ್ದರು.
ಹೂಡಿಕೆಯಲ್ಲಿ ಶೇ.46ರಷ್ಟು ಜಾರಿ: ‘ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದಿದ್ದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ (ಜಿಐಎಂ) ಘೋಷಿಸಲಾಗಿದ್ದ 10.27 ಲಕ್ಷ ಕೋಟಿ ಮೊತ್ತದ ಹೂಡಿಕೆಯಲ್ಲಿ ಈಗಾಗಲೇ ಶೇ.46ರಷ್ಟು ಕಾರ್ಯಗತಗೊಂಡಿವೆ. ಕೇವಲ ಘೋಷಣೆಗಳಿಗೆ ಸೀಮಿತವಾಗಿರದೆ, ಈ ಬದ್ಧತೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ನಾವು ಗಮನ ಕೇಂದ್ರೀಕರಿಸಿದ್ದೇವೆ. ಯೋಜನೆಗಳು ಕಾರ್ಯಗತಗೊಳ್ಳುವ ಪ್ರಗತಿ ಪಥದಲ್ಲಿ ತಯಾರಿಕಾ ವಲಯವು (ಶೇಕಡ 58ರಷ್ಟು) ಮುಂಚೂಣಿಯಲ್ಲಿ ಇರುವುದು ಸೇರಿದಂತೆ ಒಟ್ಟಾರೆ ಹೂಡಿಕೆ ಯೋಜನೆಗಳು ನಿರೀಕ್ಷೆಯಂತೆ ಕಾರ್ಯಗತಗೊಳ್ಳುತ್ತಿವೆ. ಈ ಎಲ್ಲ ಯೋಜನೆಗಳಿಂದ ರಾಜ್ಯದಲ್ಲಿ ಅಂದಾಜು 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿ ಆಗುವುದನ್ನು ನಿರೀಕ್ಷಿಸಲಾಗಿದೆ’
-ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ