ಮತದಾರರ ಪಟ್ಟಿಯಲ್ಲಿ ಬಾಂಗ್ಲಾ ವಲಸಿಗರಿಗೆ ಮಣೆ : ಎಚ್.ಡಿ.ಕುಮಾರಸ್ವಾಮಿ ಆರೋಪ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ರಾಜ್ಯದ ಹಲವಾರು ಭಾಗಗಳಲ್ಲಿ ಕಾಂಗ್ರೆಸ್ ಸರಕಾರ ಹಾಳುಮಾಡಲು ಹೊರಟಿದೆ. ಇದಕ್ಕೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮವೇ ಸಾಕ್ಷಿ. ಕೂಡಲೇ ರಾಮನಗರ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ನೇರ ಪ್ರಭಾವ ಬಳಸಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಸೇರಿದಂತೆ ಸಾವಿರಾರು ಕಳ್ಳ ಮತದಾರರಿಗೆ ದಾಖಲೆ ಸೃಷ್ಟಿಸುವ ಯತ್ನ ನಡೆಯುತ್ತಿದೆ. ಕೂಡಲೇ ಕೇಂದ್ರೀಯ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು. ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರಮಗಳನ್ನು ನೋಡಿದರೆ ನಮ್ಮ ಪ್ರಜಾಪ್ರಭುತ್ವ ಎಲ್ಲಿಗೆ ಬಂದಿದೆ ಎಂಬುದು ಅರ್ಥವಾಗುತ್ತದೆ. ಒಂದು ಕೈಯಲ್ಲಿ ಸಂವಿಧಾನ ಹಿಡಿದು ಪ್ರದರ್ಶನ ಮಾಡುವ ಪಕ್ಷ ಮಾಡುತ್ತಿರುವ ಹೀನ ಕೆಲಸ ಇದಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಕತ್ತರಿಯಾಗುವುದಾಗಿ ಜನರಲ್ಲಿ ಪ್ರೀತಿ ಸೂಚಿಸಿ ಈ ದಂಧೆ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು. ನಿಯಮದಂತೆ ಬಿಎಲ್‌ಒಗಳು ಮನೆ-ಮನೆಗೆ ಹೋಗಬೇಕಾದರೆ, ರಾಮನಗರದಲ್ಲಿ ಸಿಎಂ ಪ್ರಭಾವ ಬಳಸಿ ಸಾವಿರಾರು ಜನರನ್ನು ಟಿಪ್ಪುನಗರದ ಕಲ್ಯಾಣ ಮಂಟಪದಲ್ಲಿ ಕೂರಿಸಿ ಎಸ್‌ಐಆರ್ ಜಾತ್ರೆ ನಡೆಸುತ್ತಿದ್ದಾರೆ. ದೇಶದ ಭದ್ರತೆಗೆ ಸವಾಲಾಗಿರುವ ಬಾಂಗ್ಲಾ ನುಸುಳುಕೋರರನ್ನು ಇಲ್ಲಿ ಪೋಷಿಸಿ, ಅವರಿಗೆ ಮತದಾನದ ಹಕ್ಕು ಕೊಡಿಸುವ ವ್ಯವಸ್ಥಿತ ಸಂಚು ಇದು ಎಂದು ಅವರು
ಗುಡುಗಿದರು.
ಕೇಂದ್ರಕ್ಕೆ ದೂರು
ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವ ಈ ಅಕ್ರಮವನ್ನು ಸುಮ್ಮನೇ ಬಿಡಲ್ಲ. ವೀಡಿಯೊ ಸಮೇತ ಎಲ್ಲ ಸಾಕ್ಷ್ಯಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡುತ್ತೇನೆ. ತಕ್ಷಣ ಮಧ್ಯಪ್ರವೇಶಿಸಿ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.