ವಾರ್ತಾ ಇಲಾಖೆಗೆ ಹೊಸ ತಂತ್ರಜ್ಞಾನ ಅಳವಡಿಸುವ ಚಿಂತನೆ : ಎಂ.ಎನ್.ಅನುಚೇತ್
ಬೆಂಗಳೂರು : ಸರಕಾರದ ಯೋಜನೆಗಳನ್ನು ಜನ-ಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ನವ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಕ್ರಮ ವಹಿಸಲಾಗುವುದು ಎಂದು ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಗುರುವಾರ ವಾರ್ತಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಜಿಲ್ಲಾ ವಾರ್ತಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ಮಾಧ್ಯಮಗಳ ಜತೆಗೆ ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳನ್ನು ಕೂಡ ಬಳಸಿಕೊಂಡು ಸರಕಾರದ ಧ್ಯೇಯೋದ್ದೇಶಗಳನ್ನು ಪ್ರಚುರ ಪಡಿಸುವ ಕೆಲಸವನ್ನು ವಾರ್ತಾ ಇಲಾಖೆ ಮಾಡಬೇಕಿದೆ ಎಂದು ಹೇಳಿದರು.
ಆಧುನಿಕ ಕಾಲದಲ್ಲಿ ಸಾಮಾಜಿಕ ಜಾಲತಾಣಗಳನ್ನು ಯುವಜನತೆ ಹೆಚ್ಚು ಬಳಸುತ್ತಾರೆ. ಸರಕಾರದ ಧ್ಯೇಯೋದ್ದೇಶಗಳನ್ನು ಅವರಿಗೆ ಹೇಗೆ ತಲುಪಿಸಬಹುದು ಎಂದು ರೂಪುರೇಷೆಗಳನ್ನು ಹಾಕಿಕೊಂಡು ಕಾರ್ಯ ನಿರ್ವಹಿಸಬೇಕಿದೆ. ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಅಧಿಕಾರಿಗಳು ಪತ್ರಿಕೋದ್ಯಮದ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ತಮ್ಮೊಳಗಿನ ಬರಹಗಾರನನ್ನು ಜೀವಂತವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ನೂತನ ಆಯುಕ್ತರು ಸಲಹೆ ನೀಡಿದರು.
ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಇಲಾಖೆಗೆ ಒಳ್ಳೆಯ ಹೆಸರು ತರಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲರೂ ಜೊತೆಯಾಗಿ ಶ್ರಮಿಸೋಣ ಎಂದು ಕರೆ ನೀಡಿದರು. ಈ ವೇಳೆ ಐಪಿಎಸ್ ಅಧಿಕಾರಿ ಹೇಮಂತ್ ಎಂ.ನಿಂಬಾಳ್ಕರ್, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ, ಸಿ.ಆರ್.ನವೀನ್, ಪಲ್ಲವಿ ಹೊನ್ನಾಪುರ, ಜಿ.ಬಿ.ಸಿದ್ದೇಶ್ವರಪ್ಪ ಉಪಸ್ಥಿತರಿದ್ದರು.