ಇಸ್ರೋ ಕೇಂದ್ರ ಕಚೇರಿಗೆ ಹುಸಿ ಬಾಂಬ್ ಬೆದರಿಕೆ
ಸಾಂದರ್ಭಿಕ ಚಿತ್ರ(PTI)
ಬೆಂಗಳೂರು : ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಕೇಂದ್ರ ಕಚೇರಿಗೆ ಇ-ಮೇಲ್ ಮೂಲಕ ಗುರುವಾರದಂದು ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಇಸ್ರೋ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ.
ಕಚೇರಿಯ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದ್ದು, ಯಾವುದೇ ಕ್ಷಣದಲ್ಲಾದರೂ ಸ್ಪೋಟ ಮಾಡಲಾಗುವುದು ಎಂದು ಇ-ಮೇಲ್‍ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಇಸ್ರೋ ಆಡಳಿತ ಮಂಡಳಿಯು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ. ಘಟನಾ ಸ್ಥಳಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ, ಸ್ಥಳೀಯ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಧಾವಿಸಿದ್ದರು.
ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿಯಲ್ಲಿದ್ದ ಸಿಬ್ಬಂದಿ ಹಾಗೂ ವಿಜ್ಞಾನಿಗಳನ್ನು ತಕ್ಷಣವೇ ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿತ್ತು. ಇಡೀ ಕಚೇರಿ ಆವರಣವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡು ಪ್ರತಿಯೊಂದು ಮೂಲೆಯಲ್ಲೂ ತೀವ್ರ ತಪಾಸಣೆ ನಡೆಸಿದರು.