ಮುಸ್ಲಿಮರ ಮೀಸಲಾತಿ ಹೆಚ್ಚಳ ಸೇರಿದಂತೆ ಐದು ಬೇಡಿಕೆಗಳನ್ನು ಮುಂದಿಟ್ಟ ಕೆ.ಎಂ.ಯು
ಬೆಂಗಳೂರು : ರಾಜ್ಯದಲ್ಲಿ ಮುಸ್ಲಿಮರ ಮೀಸಲಾತಿ ಪ್ರಮಾಣ ಹೆಚ್ಚಳ ಸೇರಿದಂತೆ ಐದು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿರುವ ಕರ್ನಾಟಕ ಮುಸ್ಲಿಮ್ ಯುನಿಟಿ(ಕೆಎಂಯು), ಈ ಬಗ್ಗೆ ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ತಿಂಗಳು ‘ವಿಜಯಪುರದಿಂದ ಬೆಂಗಳೂರು ಚಲೋ’ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ.
ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯಾಧ್ಯಕ್ಷ ಜಬ್ಬಾರ್ ಕಲಬುರಗಿ, ಹಿಂದುಳಿದ ವರ್ಗಗಳಡಿಯಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ 2ಬಿ ಮೀಸಲಾತಿಯನ್ನು ಮರು ಸ್ಥಾಪಿಸಬೇಕು. ಈಗಿರುವ ಶೇ.4ರಷ್ಟು ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಚುನಾವಣೆಗಳ ಒಬಿಸಿ ಮೀಸಲಾತಿಯಲ್ಲಿ ಪ್ರಬಲ ಜಾತಿಗಳಿಂದ ಮುಸ್ಲಿಮರು ಅವಕಾಶ ವಂಚಿತರಾಗುತ್ತಿದ್ದು, ಇದಕ್ಕೆ ಪರಿಹಾರವಾಗಿ ಈ ಮೀಸಲಾತಿಯಲ್ಲಿ ಒಳಮೀಸಲು ತಂದು ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ಜಾರಿಗೊಳಿಸಬೇಕು. ಅತಿ ಹಿಂದುಳಿದ ನದಾಫ್ -ಪಿಂಜಾರ ಸಮುದಾಯಗಳ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ವಕ್ಫ್ ಮಂಡಳಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ವಕ್ಫ್ ನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಕೇಂದ್ರ ಸರಕಾರದ ಹೊಸ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರಕಾರ ನಿರ್ಣಯವನ್ನು ಕೈಗೊಳ್ಳಬೇಕು. ಹಾಗೂ ರಾಜ್ಯದ ಪರವಾನಗಿ ಹೊಂದಿರುವ ಮುಸ್ಲಿಮ್ ಗುತ್ತಿಗೆದಾರರಿಗೆ ಆದ್ಯತೆ ಹಾಗೂ ವಿಶೇಷ ಅವಕಾಶಗಳನ್ನು ನೀಡಬೇಕು ಎಂದು ಜಬ್ಬಾರ್ ಕಲಬುರಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮುಸ್ಲಿಮ್ ಯುನಿಟಿ(ಕೆಎಂಯು)ಯ ಗೌರವಾಧ್ಯಕ್ಷ ಜಿ.ಎ.ಬಾವ, ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ಕೆಎಂಯು ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ನಮ್ಮ ಮನವಿ ಪತ್ರ ಸ್ವೀಕರಿಸಿದ್ದಾರೆ. ಅಲ್ಲದೇ, ನಮ್ಮ ಬೇಡಿಕೆ, ಹಕ್ಕೋತ್ತಾಯಗಳ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಸರಕಾರ ತಮ್ಮ ಬೇಡಿಕೆಗಳನ್ನು ಒಪ್ಪಿ ಪರಿಹಾರ ಕೊಡಬೇಕು. ಇಲ್ಲದಿದ್ದರೆ, ಮುಂದಿನ ತಿಂಗಳಲ್ಲಿ ಬಿಜಾಪುರದಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು.
-ಡಾ.ಖಾಸಿಂ ಸಾಬ್, ಪ್ರಧಾನ ಕಾರ್ಯದರ್ಶಿ, ಕೆಎಂಯು