Bengaluru | ಮದ್ಯ ಕುಡಿದು ಪ್ರತಿನಿತ್ಯ ಜಗಳ ಮಾಡುತ್ತಿದ್ದ ಪತಿಯನ್ನು ಇರಿದು ಕೊಂದ ಪತ್ನಿ!
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಪ್ರತಿನಿತ್ಯ ಮದ್ಯ ಕುಡಿದು ಬಂದು ವಿನಾಕಾರಣ ಜಗಳ ಮಾಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ.
ಅಸ್ಸಾಂ ಮೂಲದ ರಾಜೀವ್ ರಜಪೂತ್(28) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಎಂಟು ವರ್ಷದ ಹಿಂದೆ ರುಬಿನಾ ಕೌರ್ ಎಂಬುವರನ್ನು ರಾಜೀವ್ ರಜಪೂತ್ ಮದುವೆಯಾಗಿದ್ದು, ದಂಪತಿಗೆ ಒಂದು ಮಗುವಿದೆ. ಈ ಕುಟುಂಬ ವರ್ತೂರಿನ ಮುನೇಕೊಳಲು ಶಿರಡಿ ಸಾಯಿಬಾಬಾ ದೇವಸ್ಥಾನದ ಬಳಿ ವಾಸವಾಗಿದೆ. ರಾಜೀವ್ ರಜಪೂತ್ ಕೆಲಸಕ್ಕೆ ಹೋಗದೆ ಪ್ರತಿದಿನ ಮದ್ಯ ಕುಡಿದು ಮನೆಗೆ ಬಂದು ವಿನಾಕಾರಣ ಪತ್ನಿ ರುಬಿನಾ ಜೊತೆ ಜಗಳವಾಡುತ್ತಿದ್ದನು ಎಂದು ತಿಳಿದುಬಂದಿದೆ.
ಕುಟುಂಬ ನಿರ್ವಹಣೆಗಾಗಿ ತಾನು ಕೆಲಸಕ್ಕೆ ಹೋಗುವುದಾಗಿ ರುಬಿನಾ ಕೇಳಿದರೂ ಪತಿ ಕೆಲಸಕ್ಕೆ ಕಳುಹಿಸಿಲ್ಲ. ಹಾಗೆಯೇ ದಿನ ದೂಡುತ್ತಿದ್ದನು. ಬುಧವಾರ(ಡಿ.24) ರಾತ್ರಿ ಕುಡಿದು ಬಂದು ಪತ್ನಿ ಜೊತೆ ಜಗಳವಾಡಿದ್ದಾನೆ. ಗುರುವಾರ(ಡಿ.25) ಬೆಳಗಿನ ಜಾವ ರಾಜೀವ್ ಮತ್ತೆ ಪತ್ನಿ ಜೊತೆ ಜಗಳವಾಡಿದಾಗ ಆತನ ವರ್ತನೆಯಿಂದ ರೋಸಿ ಹೋದ ಆಕೆ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ಪತಿಯ ಎದೆ, ಹೊಟ್ಟೆ ಸೇರಿದಂತೆ ಇನ್ನಿತರ ದೇಹದ ಭಾಗಗಳಿಗೆ ಇರಿದಿದ್ದಾಳೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ರಾಜೀವ್ ರಜಪೂತ್ ಕುಸಿದು ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೂಗಾಟದ ಶಬ್ದ ಕೇಳಿ ಅಕ್ಕಪಕ್ಕದ ನಿವಾಸಿಗಳು ಇವರ ಮನೆ ಬಳಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ವ್ಯಕ್ತಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಈ ಸಂಬಂಧ ಮಾಹಿತಿ ಪಡೆದ ವರ್ತೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಖಚಿತವಾಗಿದೆ. ಈ ಬಗ್ಗೆ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ರುಬಿನಾಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.