ಹಿರಿಯ ಹೋರಾಟಗಾರ್ತಿ ಕೆ.ಪದ್ಮಾ ನಿಧನ
Update: 2025-12-25 23:37 IST
ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯಕರ್ತೆ ಕೆ.ಪದ್ಮಾ(62) ಅವರು ಬುಧವಾರ(ಡಿ.24) ತಡರಾತ್ರಿ ಬೆಂಗಳೂರಿನ ನಾಗದೇವನಹಳ್ಳಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ನಾಲೈದು ವರ್ಷಗಳಿಂದ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ನಿರಂತರ ಚಿಕಿತ್ಸೆಯೊಂದಿಗೆ ವರ್ಷಗಳನ್ನು ದೂಡಿದ್ದರು. ತಮ್ಮ ಅನಾರೋಗ್ಯದ ನಡುವೆಯೂ ಹೋರಾಟ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ತೆರೆಮರೆಯ ಕೆಲಸಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಕೆ.ಪದ್ಮಾ, ವೇದಿಕೆಗಳಿಂದ ದೂರ ಉಳಿದಿದ್ದರು.
ಇವರು ಮೂಲತಃ ಆಂಧ್ರಪ್ರದೇಶದವರಾಗಿದ್ದು, ಹಿಂದಿನ 20 ವರ್ಷಗಳಿಂದ ಕರ್ನಾಟಕದ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು. ಕರ್ನಾಟಕ ಜನಶಕ್ತಿ ಸಂಘಟನೆಯಲ್ಲಿದ್ದ ಪದ್ಮಾ ಕಾರ್ಮಿಕ ಮತ್ತು ಭೂಮಿ-ವಸತಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.