×
Ad

ಬೆಂಗಳೂರು | ಸಮೀಕ್ಷೆಗೆ ಹೋದ ಶಿಕ್ಷಕಿಯನ್ನು ಕೂಡಿಹಾಕಿದ ಆರೋಪಿಯ ಬಂಧನ

Update: 2025-10-09 19:14 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.9: ಸಾಮಾಜಿಕ, ಶೈಕ್ಷಣಿಕೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ, ಮನೆಯ ಕಾಂಪೌಂಡ್‍ನಲ್ಲಿ ಕೂಡಿಹಾಕಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂದೀಪ್(30) ಬಂಧಿತ ಆರೋಪಿ. ಶಿಕ್ಷಕಿ ಸುಶೀಲಮ್ಮ ಎಂಬವರು ನೀಡಿದ ದೂರಿನನ್ವಯ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಡಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸರಕಾರದ ಆದೇಶದಂತೆ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಕರ್ತವ್ಯಕ್ಕಾಗಿ ಸುಶೀಲಮ್ಮ ಅವರನ್ನು ನಿಯೋಜಿಸಲಾಗಿತ್ತು. ಇದರಂತೆ ಮನೆ-ಮನೆ ಗಣತಿ ಕಾರ್ಯ ಕೈಗೊಂಡಿದ್ದರು. ಅ.8ರ ಬುಧವಾರ ಸಂಜೆ ನಗರದ ಕೋತಿಹೊಸಹಳ್ಳಿ ಬಳಿ ಗಣತಿಗಾಗಿ ಆರೋಪಿಯ ಮನೆಗೆ ತೆರಳಿದ್ದರು. ಸಮೀಕ್ಷೆಗೆ ಬಂದಿದ್ದು, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲಾತಿ ನೀಡುವಂತೆ ಮನೆಯಲ್ಲಿದ್ದ ಆರೋಪಿಯ ತಾಯಿಗೆ ಕೇಳಿದ್ದರು. ಇದರಂತೆ ಮಾಹಿತಿ ಪಡೆದು ಆನ್‍ಲೈನ್ ಮುಖಾಂತರ ಒಟಿಪಿ ಸಂಖ್ಯೆ ಪಡೆದುಕೊಂಡಿದ್ದರು. ಈ ವೇಳೆ, ಮನೆಗೆ ಬಂದ ಸಂದೀಪ್ ಶಿಕ್ಷಕಿ ಜೊತೆ ರಾದ್ದಾಂತ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಣತಿ ಕಾರ್ಯಕ್ಕಾಗಿ ಬಂದಿರುವುದಾಗಿ ಶಿಕ್ಷಕಿ ಪರಿಚಯಿಸಿಕೊಂಡು ಗುರುತಿನ ಚೀಟಿ ತೋರಿಸಿದರೂ ಇದನ್ನು ನಂಬದ ಆರೋಪಿ ನೀವು ಯಾವ ಕಂಪೆನಿಯವರು? ನನ್ನ ತಾಯಿಯಿಂದ ಯಾಕೆ ಓಟಿಪಿ ಪಡೆದುಕೊಂಡಿದ್ದೀರಿ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದ್ದಾನೆ. ಅಲ್ಲದೆ, ಶಿಕ್ಷಕಿ ಬಳಿಯಿದ್ದ ಗುರುತಿನ ಚೀಟಿ ಕಸಿದುಕೊಂಡಿದ್ದಾನೆ. ಗಣತಿಗಾಗಿ ಬಂದಿರುವುದಾಗಿ ಹಲವು ಬಾರಿ ತಿಳಿಸಿದರೂ ನಂಬದ ಆರೋಪಿ ಮನೆ ಆವರಣದ ಗೇಟ್‍ಗೆ ಬೀಗ ಹಾಕಿ ಕೂಡಿ ಹಾಕಿದ್ದಾನೆ. ಕೂಡಲೇ ನಿಮ್ಮ ಕಂಪೆನಿಯವರನ್ನು ಕರೆಸುವಂತೆ ತಾಕೀತು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದು ಮೇಲಾಧಿಕಾರಿಗಳು ತಿಳಿ ಹೇಳಿದರೂ ಆರೋಪಿಯು ತನ್ನ ವಾಗ್ವಾದ ಮುಂದುವರೆಸಿದ್ದ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 112ಗೆ ಕರೆ ಮಾಡಿ ಸುಶೀಲಮ್ಮ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕೂಡಿಹಾಕಿದ್ದ ಮಹಿಳೆಯನ್ನು ಬಿಡಿಸಿಕೊಂಡು ಆಕೆಯಿಂದ ದೂರು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಈ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್ ಪ್ರತಿಕ್ರಿಯಿಸಿ, ‘ಗಣತಿಗಾಗಿ ಮನೆಗೆ ತೆರಳಿದಾಗ ಆರೋಪಿಯು ಶಿಕ್ಷಕಿಯ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಆಕೆಯನ್ನು ಕೂಡಿ ಹಾಕಿದ್ದ. ಈ ಘಟನೆ ಬಗ್ಗೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮನೆಯಲ್ಲಿ ತಾಯಿ ಹಾಗೂ ಮಗ ವಾಸವಾಗಿದ್ದಾರೆ. ಸದ್ಯ ಆರೋಪಿ ವಿರುದ್ಧ ತನಿಖೆ ಮುಂದುವರೆಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News