ಬೆಂಗಳೂರು | ಶಾಲೆ ಕಾಲೇಜುಗಳಿಗೆ ಹುಸಿ ಬಾಂಬ್ ಬೆದರಿಕೆ: ಆರೋಪಿ ರೆನೆ ಜೊಶಿಲ್ದಾ ಬಂಧನ
ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಕೃತ್ಯ!
ಆರೋಪಿ ರೆನೆ ಜೊಶಿಲ್ದಾ
ಬೆಂಗಳೂರು : ಬೆಂಗಳೂರಿನ ವಿವಿಧ ಶಾಲಾ, ಕಾಲೇಜುಗಳಿಗೆ ಹುಸಿ ಬಾಂಬ್ ಸಂದೇಶ ಕಳುಹಿಸಿ ಬೆದರಿಕೆ ಹಾಕುತ್ತಿದ್ದ ಆರೋಪಿ ಯುವತಿ ರೆನೆ ಜೊಶಿಲ್ದಾ ಅನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್‍ನ ಅಹಮದಾಬಾದ್‍ನ ಕೇಂದ್ರ ಕಾರಾಗೃಹದಲ್ಲಿದ್ದ 30 ವರ್ಷದ ರೆನೆ ಜೊಶಿಲ್ದಾ ಅನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡು ಮೂಲದ ಆರೋಪಿ ರೆನೆ ಜೊಶಿಲ್ದಾ, ಬಿಇ ವ್ಯಾಸಂಗ ಮಾಡಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಜೂನ್ 14ರಂದು ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿತ್ತು.
ಅದೇ ರೀತಿ ಬೇರೆ ಬೇರೆ ದಿನಗಳಲ್ಲಿ ನಗರದ ವಿವಿಧ ಶಾಲೆಗಳಿಗೆ ಹುಸಿ ಬಾಂಬ್ ಸಂದೇಶಗಳು ಬಂದಿದ್ದವು. ಸರಣಿ ಹುಸಿ ಬಾಂಬ್ ಸಂದೇಶ ಪ್ರಕರಣಗಳ ಜಾಡು ಪತ್ತೆ ಹಚ್ಚಲು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಉತ್ತರ ವಿಭಾಗದ ಸೈಬರ್ ಠಾಣೆಗೆ ವರ್ಗಾಯಿಸಿದ್ದರು. ಆನಂತರ, ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿ ಯುವತಿಯನ್ನು ಪತ್ತೆ ಹಚ್ಚಿದೆ.
ಯುವತಿ ವೃತ್ತಿಯಲ್ಲಿ ರೋಬೊಟಿಕ್ ಇಂಜಿನಿಯರ್ ಆಗಿದ್ದಾರೆ. ವಿಪಿಎನ್ ಮೂಲಕ ಲಾಗಿನ್ ಆಗಿ, ಗೇಟ್‍ಕೋಡ್ ಅಪ್ಲಿಕೇಶನ್ ಮೂಲಕ ವರ್ಚುವಲ್ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ಸುಮಾರು 6ರಿಂದ 7 ವಾಟ್ಸಾಪ್ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ ಯುವತಿ, ಕರ್ನಾಟಕ ಸೇರಿದಂತೆ ದೇಶದ ಇತರೆ 11 ರಾಜ್ಯಗಳ ಶಾಲಾ-ಕಾಲೇಜುಗಳಿಗೆ ಹುಸಿ ಬಾಂಬ್ ಸಂದೇಶ ಕಳುಹಿಸುತ್ತಿದ್ದಳು ಎನ್ನುವ ಮಾಹಿತಿ ಗೊತ್ತಾಗಿದೆ.
ಬೆಂಗಳೂರು ಮೂಲದ ಪ್ರಭಾಕರ್ ಎಂಬವನನ್ನು ಯುವತಿ ಪ್ರೀತಿಸಿದ್ದಳು. ಆದರೆ ಆತ ಈಕೆಯ ಪ್ರೀತಿಗೆ ಒಲ್ಲೆ ಎಂದಿದ್ದ. ಕಳೆದ ಫೆಬ್ರುವರಿಯಲ್ಲಿ ಬೇರೊಬ್ಬರೊಂದಿಗೆ ಪ್ರಿಯಕರನ ಮದುವೆಯಾಗಿತ್ತು. ಇದಕ್ಕೆ ಅಸಮಾಧಾನಗೊಂಡಿದ್ದ ಯುವತಿ ಪ್ರಿಯಕರನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯೋಜಿಸಿದ್ದಳು ಎನ್ನಲಾಗಿದೆ.
ಪ್ರಿಯತಮನ ಹೆಸರಿನಲ್ಲಿ ಇಮೇಲ್ ಖಾತೆ ಸೃಷ್ಟಿಸಿ, ದೇಶದೆಲ್ಲೆಡೆ ಹುಸಿ ಬಾಂಬ್ ಸಂದೇಶ ಕಳುಹಿಸುತ್ತಿದ್ದಳು. ಗುಜರಾತ್ ನರೇಂದ್ರ ಮೋದಿ ಮೈದಾನ, ಏರ್ ಇಂಡಿಯಾ ವಿಮಾನ ದುರಂತ ರೀತಿಯಲ್ಲಿ ಶಾಲೆಯನ್ನು ಉಡಾಯಿಸುವುದಾಗಿ ಬಾಂಬ್ ಸಂದೇಶ ಕಳುಹಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಈಕೆಯ ವಿರುದ್ಧ ಬೆಂಗಳೂರು ನಗರದಲ್ಲಿ 7 ಪ್ರಕರಣಗಳು ಹಾಗೂ ಗುಜರಾತ್, ತಮಿಳುನಾಡು, ಹರಿಯಾಣ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 40ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹುಸಿ ಬಾಂಬ್ ಸಂದೇಶ ಸಂಬಂಧ ಕೆಲ ತಿಂಗಳ ಹಿಂದೆ ಅಹಮದಾಬಾದ್ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇತ್ತ ನಗರ ಪೊಲೀಸರ ತಾಂತ್ರಿಕ ತನಿಖೆಯಲ್ಲಿ ಆರೋಪಿತೆಯ ಪಾತ್ರ ಕಂಡುಬಂದಿದ್ದರಿಂದ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದನ್ನು ಬಾಯ್ಬಿಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ವಿರುದ್ಧ ಬೆಂಗಳೂರು ನಗರದಲ್ಲಿ ದಾಖಲಾಗಿದ್ದ 7 ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಗೊತ್ತಾಗಿದೆ. ದೇಶದೆಲ್ಲೆಡೆ 40ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದ್ದು, ತನಿಖೆ ಮುಂದುವರೆಸಲಾಗಿದೆ.
-ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ