Bengaluru | ವಿದ್ಯಾರ್ಥಿಗಳ ವಿದೇಶಿ ಪ್ರಯಾಣ ನಿಧಿ ದುರುಪಯೋಗ ಆರೋಪ: ಇಬ್ಬರು ಐಐಎಸ್‍ಸಿ ನೌಕರರು ಸಹಿತ ಮೂವರ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು : ವಿದ್ಯಾರ್ಥಿಗಳ ವಿದೇಶ ಪ್ರಯಾಣಕ್ಕಾಗಿ ಮೀಸಲಾದ 1.94ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‍ಸಿ) ಇಬ್ಬರು ಗುತ್ತಿಗೆ ನೌಕರರು ಸಹಿತ ಮೂವರನ್ನು ಇಲ್ಲಿನ ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ವಿ.ಸೌಂದರ್ಯ(25) ಮತ್ತು ಆರ್.ದೀಪಿಕಾ(25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಈ ಆರೋಪಿಗಳು ಐಐಎಸ್‍ಸಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಹಾಯಕ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ವಂಚನೆಗೆ ಸಹಾಯ ಮಾಡಿದ ಆರೋಪದ ಮೇಲೆ ಸಚಿನ್‍ರಾವ್(25) ಎಂಬಾತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಆರೋಪಿಗಳು ಜೂನ್ 2024 ಮತ್ತು ಅಕ್ಟೋಬರ್ 2025ರ ನಡುವೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ವಂಚಿಸಿದ್ದಾರೆ. ನಕಲಿ ಅನುಮೋದನೆ ಪತ್ರಗಳನ್ನು ಬಳಸಿ, ಅವರು ಅರ್ಹ ವಿದ್ಯಾರ್ಥಿಗಳ ಪ್ರಯಾಣ ಅನುದಾನದ ಮೊತ್ತವನ್ನು ಅವರ ಸಂಬಂಧಿಕರು ಮತ್ತು ನಿಕಟವರ್ತಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರಯಾಣ ಅನುದಾನವನ್ನು ಪಡೆಯುತ್ತಿರುವುದನ್ನು ಐಐಎಸ್‍ಸಿ ಅಧಿಕಾರಿಗಳು ಗಮನಿಸಿದಾಗ ವಂಚನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ಅವರಿಂದ 80 ಲಕ್ಷ ರೂ. ಮೌಲ್ಯದ ಎರಡು ಆಸ್ತಿ ದಾಖಲೆಗಳು, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 11 ಲಕ್ಷ ರೂ. ನಗದು ಮತ್ತು ಕಾರು ಸೇರಿದಂತೆ ಸುಮಾರು 1ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿರುವುದಾಗಿ ಗೊತ್ತಾಗಿದೆ.