×
Ad

ನಿಗದಿತ ಸಮಯದೊಳಗೆ ನೀಲಿ ಮೆಟ್ರೋ ಮಾರ್ಗ ಪೂರ್ಣಗೊಳಿಸಲು ಡಿ.ಕೆ.ಶಿವಕುಮಾರ್ ಸೂಚನೆ

Update: 2025-12-05 22:46 IST

ಬೆಂಗಳೂರು : ನಿಗದಿತ ಅವಧಿಯೊಳಗೆ ನೀಲಿ ಮೆಟ್ರೋ ಮಾರ್ಗ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಕೆ.ಆರ್.ಪುರದಿಂದ ಸಿಲ್ಕ್ ಬೋರ್ಡ್‍ವರೆಗಿನ ಮಾರ್ಗವನ್ನು 2026ರ ಡಿಸೆಂಬರ್‌ ಗೆ ಮುಗಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಉಳಿದಂತೆ ಕೆ.ಆರ್ ಪುರದಿಂದ ಹೆಬ್ಬಾಳ ವರೆಗಿನ ಮಾರ್ಗವನ್ನು 2027ರ ಡಿಸೆಂಬರ್ ವೇಳೆಗೆ ಹಾಗೂ ಹೆಬ್ಬಾಳದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2027 ಜೂನ್‍ಗೆ ಪೂರ್ಣಗೊಳಿಸುತ್ತೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಸಾಧಿಸುತ್ತಿರುವ ಮೆಟ್ರೋ ಮಾರ್ಗದ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ಕರೆಸಿ ಚರ್ಚಿಸಿದ್ದೇವೆ. ಗುತ್ತಿಗೆದಾರ ಸಂಸ್ಥೆಯು ಕೆಲವು ಸಬೂಬು ಹೇಳುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸಲು ಸೂಚಿಸಿದ್ದೇನೆ. ಈ ಭಾಗದಲ್ಲಿ ಕೆಲವು ಸಮಸ್ಯೆಗಳಿದ್ದ ಕಾರಣ ನಾನು ಸ್ಥಳಕ್ಕೆ ಬಂದು ಭೇಟಿ ನೀಡಿದ್ದೇನೆ ಎಂದರು.

ಇಲ್ಲಿನ ಕಾಮಗಾರಿ ಪೂರ್ಣವಾಗುವವರೆಗೂ ಇಲ್ಲಿರುವ ಪ್ರಮುಖ ಯಂತ್ರವನ್ನು ಬೆಂಗಳೂರಿನಿಂದಾಚೆಗೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ. ಇದರ ಉಸ್ತುವಾರಿಯನ್ನು ತುಷಾರ್ ಗಿರಿನಾಥ್‍ಗೆ ನೀಡಲಾಗಿದೆ. ಇದು 58ಕಿ.ಮೀ ಉದ್ಧದ ಈ ಯೋಜನೆ 15ಸಾವಿರ ಕೋಟಿ ರೂ.ಮೊತ್ತದ ಯೋಜನೆಯಾಗಿದೆ. ಸಿಲ್ಕ್ ಬೋರ್ಡ್‍ನಿಂದ ವಿಮಾನ ನಿಲ್ದಾಣದವೆರೆಗಿನ ಈ ಮಾರ್ಗದಲ್ಲಿ 30ನಿಲ್ದಾಣಗಳು ಬರಲಿವೆ ಎಂದು ಅವರು ತಿಳಿಸಿದರು.

ರೈಲ್ವೆ ಸಂಚಾರ ಆರಂಭಿಸಲು ಚಿಂತನೆ: ಈ ಮಾರ್ಗದಲ್ಲಿ 5-10 ರೈಲ್ವೇ ನಿಲ್ದಾಣಗಳು ಪೂರ್ಣಗೊಳ್ಳುತ್ತಿದ್ದಂತೆ ಅಲ್ಲಿ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆಸುತ್ತಿದ್ದೇವೆ. ಕೇವಲ ರಾತ್ರಿ ವೇಳೆ ಮಾತ್ರ ಕೆಲಸ ಮಾಡಲಾಗುತ್ತಿದೆ. ಕಾಮಗಾರಿ ನಡೆಯುವ ವೇಳೆ ಒಂದು ಸಾವು ಉಂಟಾದ ನಂತರ ಸಂಚಾರ ದಟ್ಟಣೆ ನೋಡಿಕೊಂಡು ಕೆಲಸ ಮಾಡಲಾಗುತ್ತಿದೆ. ಇದು ವಾಸ್ತವದ ಪರಿಸ್ಥಿತಿ. ಟೀಕೆ ಮಾಡುವವರು, ಮಾತನಾಡುವವರು ಏನೇ ಹೇಳಿದರೂ ಕೆಲಸ ನಡೆಯಲೇಬೇಕು ಎಂದರು.

ಡೆಪಾಸಿಟ್ ಇಡಲು ಸೂಚನೆ: ಬೆಳಗ್ಗೆಯಿಂದ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದೇನೆ. ಮುಂದಿನ 15 ದಿನಗಳ ಕಾಲ ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಗೆ ತೆರಳಬೇಕಿದ್ದು, ಅದಕ್ಕೂ ಮುನ್ನ ಬಿಎಂಆರ್‍ಡಿಎ, ಬಿಡಿಎ, ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗಳಲ್ಲಿ ಏನೆಲ್ಲಾ ಆಗಬೇಕಿದೆ ಎಂದು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ವಿಚಾರದಲ್ಲಿ ಸರಕಾರದ ಪರಿಹಾರಕ್ಕೆ ಒಪ್ಪಿ ಭೂಮಿ ನೀಡುವ ರೈತರಿಗೆ ತೀರ್ಮಾನ ಮಾಡಲಾಗಿರುವ ಪರಿಹಾರವನ್ನು ನೀಡುತ್ತೇವೆ. ಯಾರು ಒಪ್ಪುವುದಿಲ್ಲವೋ ಅವರಿಗೆ ಕೋರ್ಟ್‍ನಲ್ಲಿ ಹಳೆಯ ದರದಲ್ಲಿ ಡೆಪಾಸಿಟ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News