Bengaluru | ‘ಬಿಹಾರ ಫಲಿತಾಂಶ’ ಬಿಜೆಪಿ ಸಂಭ್ರಮಾಚರಣೆ
ಬೆಂಗಳೂರು : ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್‍ಡಿಎ ಐತಿಹಾಸಿಕ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಬಳಿ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸಂಭ್ರಮಾಚರಣೆ ಮಾಡಿದರು.
ಶುಕ್ರವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಎನ್‍ಡಿಎ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಚೇರಿಗೆ ಧಾವಿಸಿದರು. ಈ ವೇಳೆ ಪಕ್ಷದ ಬಾವುಟ ಹಿಡಿದ ಮುಖಂಡರು ಘೋಷಣೆ ಕೂಗಿದರು.
ಅಲ್ಲದೆ, ಇದೇ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಿಹಿಯನ್ನು ಹಂಚಿ, ಕುಣಿದು ಕುಪ್ಪಳಿಸಿ ಸಂಭ್ರಮ ವ್ಯಕ್ತಪಡಿಸಿದರು.
ಈ ವೇಳೆ ಪಕ್ಷದ ಮುಖಂಡರಾದ ಎನ್.ರವಿಕುಮಾರ್, ಪಿ.ರಾಜೀವ್, ಲೇಹರ್ ಸಿಂಗ್, ಡಾ.ಚಂದ್ರು ಲಮಾಣಿ, ಸಿಮೆಂಟ್ ಮಂಜುನಾಥ್, ಎಂ.ಡಿ.ಲಕ್ಷ್ಮೀನಾರಾಯಣ್, ಡಾ.ಉಮೇಶ್ ಜಾಧವ್, ಎನ್. ಮಹೇಶ್, ಶರಣು ತಳ್ಳಿಕೇರಿ, ಬಂಗಾರು ಹನುಮಂತು, ಉಮೇಶ್ ಕಾರಜೋಳ, ಎಸ್.ಹರೀಶ್, ಸಪ್ತಗಿರಿ ಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.
ರಾಜ್ಯದಲ್ಲಿ ಬಿಹಾರ ಫಲಿತಾಂಶ ಮರುಕಳಿಸಲಿದೆ: ‘ಬಿಹಾರದ ಮತದಾರರು ಕಾಂಗ್ರೆಸಿನ ‘ಮತಗಳ್ಳತನ’ ಸುಳ್ಳು ಸಂಕಥನಕ್ಕೆ ಕಪಾಳಮೋಕ್ಷ ಮಾಡಿದ್ದಾರೆ. ಪ್ರಧಾನಿ ಮೋದಿಯವರ ‘ವಿಕಸಿತ ಭಾರತ' ಸಂಕಲ್ಪಕ್ಕೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಸುಳ್ಳಿನ ಕಥೆಗಳನ್ನೇ ಸೃಷ್ಟಿಸಿ ಅಪಪ್ರಚಾರ ನಡೆಸಿತು, ಅದು ನಿಷ್ಫಲವಾಗಿದೆ. ಈ ದಿಗ್ವಿಜಯ ಸಾರ್ವಕಾಲಿಕ ದಾಖಲೆ. ಸ್ವಾತಂತ್ರ್ಯೋತ್ತರ ಭಾರತದಲ್ಲೇ ಹಿಂದೆಂದೂ ಕಂಡಿರದ ದಾಖಲೆ ವಿಜಯ. ಕರ್ನಾಟಕದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಹಾರ ಫಲಿತಾಂಶ ಮರುಕಳಿಸಲಿದೆ ಎನ್ನುವ ಅಚಲ ವಿಶ್ವಾಸ ನನಗಿದೆ.
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ