×
Ad

ಬೆಂಗಳೂರಿನಲ್ಲಿ ವ್ಯಾಪಕ ತೆರಿಗೆ ವಂಚನೆ ಜಾಲ ಪತ್ತೆ: 100 ಕೋಟಿ ರೂ.ಮೌಲ್ಯದ ಅಕ್ರಮ ವಹಿವಾಟು ಬಯಲಿಗೆಳೆದ ಐಟಿ

Update: 2025-11-29 19:59 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ತೆರಿಗೆ ಅಕ್ರಮದಲ್ಲಿ ಭಾಗಿಯಾಗಿದ್ದ ವ್ಯಾಪಾರಿಗಳ ವಿರುದ್ಧ 15 ದಿನಗಳ ರಹಸ್ಯ ಕಾರ್ಯಾಚರಣೆ ನಡೆಸಿರುವ ವಾಣಿಜ್ಯ ತೆರಿಗೆ ಇಲಾಖೆಯ(ಐ.ಟಿ.) ಅಧಿಕಾರಿಗಳು ವ್ಯಾಪಕ ತೆರಿಗೆ ವಂಚನೆ ಜಾಲವನ್ನು ಬಯಲಿಗೆಳೆದಿದ್ದು, ಸುಮಾರು 100 ಕೋಟಿ ರೂ. ಮೌಲ್ಯದ ಮರೆಮಾಚಿದ್ದ ವಹಿವಾಟು ಪತ್ತೆ ಮಾಡಿದ್ದಾರೆ.

ನಗರದ ಕೇಂದ್ರ ವಿಭಾಗ ಸೇರಿದಂತೆ ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಜೆ.ಸಿ.ರಸ್ತೆ, ಎಸ್.ಪಿ. ರಸ್ತೆಯಲ್ಲಿರುವ ವಿವಿಧ ಅಂಗಡಿಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, 100 ಕೋಟಿ ಮೌಲ್ಯದ ತೆರಿಗೆ ಮರೆಮಾಚಿ ನಡೆಸುತ್ತಿದ್ದ ವಹಿವಾಟು ಪತ್ತೆ ಮಾಡಲಾಗಿದೆ. ದಾಖಲೆ ಪರಿಶೀಲನೆ, ಡೇಟಾ ವಿಶ್ಲೇಷಣೆ ಮತ್ತು ಮುಂದಿನ ತನಿಖೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.

ಹೊಸದಿಲ್ಲಿ ಮತ್ತಿತರ ಕಡೆಗಳಿಂದ ಬಿಲ್ ರಹಿತವಾಗಿ ಹೆಚ್ಚಿನ ಸರಕು ಖರೀದಿಸಿ ತಂದು ಅವುಗಳನ್ನು ಬಿಲ್ ನೀಡದೆಯೇ ಮಾರಾಟ ಮಾಡುತ್ತಿದ್ದುದನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಎಲೆಕ್ಟ್ರಾನಿಕ್ಸ್, ವಾಹನ ಬಿಡಿ ಭಾಗಗಳು, ಗಿಫ್ಟ್ ಐಟಮ್ಸ್, ಡ್ರೈಫ್ರೂಟ್ಸ್ ಸೇರಿದಂತೆ ಮೊದಲಾದ ಸಾಮಗ್ರಿಗಳನ್ನು ಬಿಲ್‍ಗಳಿಲ್ಲದೆ ಖರೀದಿಸಿರುವುದು ಹಾಗೂ ತೆರಿಗೆ ಬಿಲ್‍ನಲ್ಲಿ ಉಲ್ಲೇಖಿಸಿರುವ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದ ಸರಕುಗಳನ್ನು ಖರೀದಿ ಮಾಡಿರುವುದು ಪತ್ತೆಯಾಗಿದೆ. ಇದರಿಂದ ಸ್ಥಳೀಯ ವ್ಯಾಪಾರಿಗಳು ಸರಕುಗಳನ್ನು ತೆರಿಗೆ ಬಿಲ್ ನೀಡದೆ ಮಾರಾಟ ಮಾಡುತ್ತಿದ್ದು, ತೆರಿಗೆದಾಯಕ ವಹಿವಾಟನ್ನು ಮರೆಮಾಚುವ ಮತ್ತು ತೆರಿಗೆ ತಪ್ಪಿಸುವ ಅಕ್ರಮ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಬ್ಬಿಣ, ಉಕ್ಕು, ಹಾರ್ಡ್‍ವೇರ್ ಮತ್ತು ಸಿಮೆಂಟ್ ವ್ಯಾಪಾರಿಗಳಿಂದ ತೆರಿಗೆ ತಪ್ಪಿಸಲು ಮಾಲುಗಳ ಜತೆಯಲ್ಲದ ನಕಲಿ ಬಿಲ್‍ಗಳನ್ನು ನೀಡಿರುವುದು ಪತ್ತೆಯಾಗಿದೆ. ವಾಸ್ತವವಾಗಿ ಸರಕುಗಳನ್ನು ನೇರವಾಗಿ ಗೃಹ ನಿರ್ಮಾಣ ಮಾಡುವ ಅಂತಿಮ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು, ಬಿಲ್ಲುಗಳನ್ನು ಅಂತಿಮ ಗ್ರಾಹಕರಿಗೆ ನೀಡುವ ಬದಲು ಗುತ್ತಿಗೆದಾರರಿಗೆ ನೀಡಿ ತೆರಿಗೆ ವಂಚಿಸುವ ಜಾಲವನ್ನು ಬಯಲಿಗೆಳೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದಲ್ಲದೆ, ತಪಾಸಣಾ ಕಾರ್ಯಾಚರಣೆಯ ವೇಳೆ 40 ಲಕ್ಷ ತೆರಿಗೆದಾಯಕ ವಹಿವಾಟು ಮೀರಿದರೂ ಜಿಎಸ್‍ಟಿ ನೋಂದಣಿ ಪಡೆಯದೆ ವ್ಯವಹಾರ ನಡೆಸುತ್ತಿರುವ ಅನೇಕ ವ್ಯಾಪಾರಗಳು ಪತ್ತೆಯಾಗಿದ್ದು, ಅಂತಹ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿ ಕಡ್ಡಾಯವಾಗಿ ಜಿಎಸ್‍ಟಿ ನೋಂದಣಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿನ ರೈಲು ನಿಲ್ದಾಣಗಳಿಂದ ಒಳಹೋಗುವ ಮತ್ತು ಹೊರಹೋಗುವ ಸರಕುಗಳ ಚಲನವಲನದ ಮೇಲೆ ಇಲಾಖೆ ಕಠಿಣ ನಿಗಾ ಇರಿಸಿದ್ದು, ಯಶವಂತಪುರ ರೈಲು ನಿಲ್ದಾಣದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 1,000 ಚೀಲಗಳ ಗುಟ್ಕಾ ಮತ್ತು ಪಾನ್ ಮಸಾಲ, ಒಣಹಣ್ಣು ಪತ್ತೆಯಾಗಿವೆ. ಇದೇ ಸಂದರ್ಭದಲ್ಲಿ, ಅಂತಾರಾಜ್ಯ ಸರಕು ಸಾಗಣೆಯಲ್ಲಿ ಸರಿಯಾದ ತೆರಿಗೆ ಬಿಲ್‍ಗಳಿಲ್ಲದೆ ಹೆಚ್ಚಿನ ಪ್ರಮಾಣದ ಕಬ್ಬಿಣದ ಸ್ಕ್ರಾಪ್ ಸಾಗಿಸುತ್ತಿದ್ದ 75ಕ್ಕೂ ಹೆಚ್ಚು ಸರಕು ವಾಹನಗಳು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News