‘ವಕ್ಫ್: ಅಪಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ
ಬೆಳಗಾವಿ : ‘ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ’ದ ವತಿಯಿಂದ ಲೇಖನಗಳ ಸಂಕಲನವಾಗಿ ರಚಿಸಲಾದ ‘ವಕ್ಫ್: ಅಪಪ್ರಚಾರ ಮತ್ತು ವಾಸ್ತವ’ ಪುಸ್ತಕವನ್ನು ಸೋಮವಾರ ಸುವರ್ಣ ವಿಧಾನಸೌಧದಲ್ಲಿ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ಶಾಸಕ ಆಸಿಫ್ ಸೇಠ್ ಬಿಡುಗಡೆ ಮಾಡಿದರು.
ವಕ್ಫ್ ವಿಷಯಕ್ಕೆ ಸಂಬಂಧಿಸಿ ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ತಪ್ಪು ಕಲ್ಪನೆಗಳನ್ನು ದೂರಗೊಳಿಸುವ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಲಾಗಿದೆ. ಇಂತಹ ಜಾಗೃತಿಪೂರ್ಣ ಹಾಗೂ ಸಂಶೋಧನಾತ್ಮಕ ಪ್ರಯತ್ನಗಳು ಅತ್ಯಂತ ಸ್ವಾಗತಾರ್ಹವಾಗಿದ್ದು, ಸಮಾಜದಲ್ಲಿ ಸರಿಯಾದ ಅರಿವು ಮೂಡಿಸಲು ಸಹಕಾರಿಯಾಗುತ್ತವೆ ಎಂದು ಝಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟರು.
ಸೋಲಿಡಾರಿಟಿ ಯೂತ್ ಮೂವ್ಮೆಂಟ್‍ನಂತಹ ಸಂಘಟನೆಗಳು ಈ ರೀತಿಯ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪನೆಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ಉಪಸ್ಥಿತರಿದ್ದರು.