Bengaluru | ಲಂಚ ಸ್ವೀಕಾರ: ಲೆಫ್ಟಿನೆಂಟ್ ಕರ್ನಲ್ ಸಹಿತ ಇಬ್ಬರನ್ನು ಬಂಧಿಸಿದ ಸಿಬಿಐ
ಬೆಂಗಳೂರು : ಬೆಂಗಳೂರು ಮೂಲದ ಕಂಪೆನಿಯೊಂದರಿಂದ 3 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದಡಿ ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಗೆ ನಿಯೋಜನೆಗೊಂಡಿದ್ದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೀಪಕ್ ಕುಮಾರ್ ಶರ್ಮಾ ಹಾಗೂ ಖಾಸಗಿ ವ್ಯಕ್ತಿ ವಿನೋದ್ ಕುಮಾರ್ ಎಂಬುವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿದೆ.
ಡಿ.20ರ ಶನಿವಾರ ದೀಪಕ್ ಕುಮಾರ್ ಶರ್ಮಾ ಅವರ ಹೊಸದಿಲ್ಲಿ ನಿವಾಸದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ಸಿಬಿಐ ಅಧಿಕಾರಿಗಳು, 2.23 ಕೋಟಿ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಮಾತ್ರವಲ್ಲದೇ ಅವರ ಪತ್ನಿಗೆ ಸಂಬಂಧಪಟ್ಟ 10 ಲಕ್ಷ ರೂಪಾಯಿ ನಗದು ಹಾಗೂ ಇತರ ಆರೋಪ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ರಕ್ಷಣಾ ಸಚಿವಾಲಯದ ಉತ್ಪಾದನಾ ಇಲಾಖೆಯ ಸಹಾಯಕ ಯೋಜನಾ ಅಧಿಕಾರಿಯಾಗಿ (ಅಂತಾರಾಷ್ಟ್ರೀಯ ಸಹಕಾರ ಮತ್ತು ರಫ್ತು) ದೀಪಕ್ ಕುಮಾರ್ ಶರ್ಮಾ ಕಾರ್ಯನಿರ್ವಹಿಸುತ್ತಿದ್ದರು. ಅವರ ಪತ್ನಿ ಕರ್ನಲ್ ಕಾಜಲ್ ಬಾಲಿ ರಾಜಸ್ಥಾನದ ಶ್ರೀಗಂಗಾನಗರದಲ್ಲಿ 16ನೇ ಪದಾತಿ ದಳದ ಅಧಿಕಾರಿಯಾಗಿದ್ದಾರೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಶರ್ಮಾ ಅವರು ರಕ್ಷಣಾ ಉತ್ಪನ್ನಗಳ ಉತ್ಪಾದನೆ ರಫ್ತು ಸೇರಿ ಇನ್ನಿತರ ವ್ಯವಹಾರಗಳಲ್ಲಿ ಖಾಸಗಿ ಕಂಪೆನಿ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಲು ಲಂಚ ಪಡೆಯುತ್ತಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಶರ್ಮಾ ಮತ್ತು ಅವರ ಪತ್ನಿ ಕರ್ನಲ್ ಕಾಜಲ್ ಬಾಲಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾನೂನುಬಾಹಿರ ವಿಧಾನಗಳ ಮೂಲಕ ಲಂಚ: ಬೆಂಗಳೂರು ಮೂಲದ ಕಂಪೆನಿಯಿಂದ ಶರ್ಮಾ ಅವರು ಲಂಚ ಸ್ವೀಕರಿಸಿರುವುದರ ಕುರಿತು ಸಿಬಿಐ ಮಾಹಿತಿ ಕಲೆ ಹಾಕಿತ್ತು. ಈ ಕಂಪೆನಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ರಾಜೀವ್ ಯಾದವ್ ಮತ್ತು ರವಜಿತ್ ಸಿಂಗ್ ಜೊತೆ ಶರ್ಮಾ ನಿರಂತರ ಸಂಪರ್ಕದಲ್ಲಿದ್ದರು. ಅವರ ಜೊತೆಗೂಡಿ, ವಿವಿಧ ಸರಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಂದ ಕಾನೂನುಬಾಹಿರ ವಿಧಾನಗಳ ಮೂಲಕ ಲಂಚ ಪಡೆಯುತ್ತಿದ್ದರು. ಈ ಕಂಪೆನಿಯ ಸೂಚನೆಯ ಮೇರೆಗೆ ವಿನೋದ್ ಕುಮಾರ್, ಶರ್ಮಾರಿಗೆ 3 ಲಕ್ಷ ರೂಪಾಯಿ ಹಣವನ್ನು ಡಿಸೆಂಬರ್ 18ರಂದು ನೀಡಿದ್ದರು ಎಂದು ಸಿಬಿಐ ಪ್ರಕಟನೆಯಲ್ಲಿ ತಿಳಿಸಿದೆ.