‘ಹಜ್‍ಯಾತ್ರೆ-2026’ ಜ.15ರೊಳಗೆ ಹಣ ಠೇವಣಿ ಇಡಲು ಇಕ್ಬಾಲ್ ಅಹ್ಮದ್ ಸಿದ್ದಿಖಿ ಮನವಿ
ಬೆಂಗಳೂರು, ಡಿ.21: ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ 2026ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಬಯಸುವ ಯಾತ್ರಾರ್ಥಿಗಳು ಜ.15ರೊಳಗೆ ಹಣ ಠೇವಣಿ ಇಟ್ಟು, ತಮ್ಮ ಆಸನಗಳನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹಜ್ ಆರ್ಗನೈಸರ್ ಅಸೋಸಿಯೇಷನ್ ಮುಖ್ಯಸ್ಥ ಇಕ್ಬಾಲ್ ಅಹ್ಮದ್ ಸಿದ್ದಿಖಿ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ನೇ ಸಾಲಿನ ಹಜ್ ಯಾತ್ರೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಸರಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಹಣ ಪಾವತಿಸುವ ವ್ಯವಸ್ಥೆಯೂ ಸೇರಿದೆ. ಹಣ ಪಾವತಿಸಲು ಸೌದಿ ಸರಕಾರ ನಿಗದಿಪಡಿಸಿದ ಗಡುವಿನೊಳಗೆ ಪಾವತಿಸಬೇಕಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಕಳೆದ ವರ್ಷ ಖಾಸಗಿ ಟೂರ್ ಆಪರೇಟರ್‌ಗಳ ಹಜ್ ಕೋಟಾವನ್ನು ಶೇ.80ರಷ್ಟು ಕಡಿತ ಮಾಡಲಾಗಿತ್ತು. ಈ ವರ್ಷ ಕೋಟಾವನ್ನು ಅನುಮೋದಿತ ಹಜ್ ಗುಂಪು ಸಂಘಟಕರಿಗೆ ಮುಂಚಿತವಾಗಿ ನಿಗದಿಪಡಿಸಲಾಗಿದೆ. ದೇಶಾದ್ಯಂತ ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ 52,500 ಯಾತ್ರಿಕರ ಕೋಟಾವನ್ನು ನೀಡಲಾಗಿದೆ, ಅದರಲ್ಲಿ 2,400 ಯಾತ್ರಿಕರನ್ನು ಕರ್ನಾಟಕದ 41 ಪ್ರವಾಸ ನಿರ್ವಾಹಕರಿಗೆ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಫಿ ಅಹ್ಮದ್, ಖಜಾಂಚಿ ಫಹೀಮುದ್ದೀನ್, ಪ್ರಮುಖರಾದ ಶಕೀಲ್ ಅಹ್ಮದ್, ಜೀಶನ್, ನಾಸಿರ್ ಖಾನ್, ಇತರ ನಿರ್ವಾಹಕರು ಉಪಸ್ಥಿತರಿದ್ದರು.