ಕೇಂದ್ರದ ಕಾರ್ಮಿಕ ಸಂಹಿತೆಗಳನ್ನು ಕಸದ ಬುಟ್ಟಿಗೆ ಹಾಕುವ ಕ್ರಾಂತಿಯಾಗಲಿ : ಮೀನಾಕ್ಷಿ ಸುಂದರಂ
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಟ್ಟು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೋ ಅಥವಾ ಸರಕಾರ ಬಿದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತದೆಯೋ, ಎಂಬುದು ಕ್ರಾಂತಿಯಲ್ಲ. ನ.1ರಿಂದ ಜಾರಿಗೆ ಬಂದಿರುವ ಕೇಂದ್ರದ ಕಾರ್ಮಿಕ ಸಂಹಿತೆಗಳನ್ನು ಕೇರಳದ ಮಾದರಿಯಲ್ಲಿ ಕಸದ ಬುಟ್ಟಿಗೆ ಎಸೆಯುವ ಕ್ರಾಂತಿ ನಡೆಯಬೇಕಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಿಪಿಐ(ಎಂ) ವತಿಯಿಂದ ಪರ್ಯಾಯ ರಾಜಕಾರಣಕ್ಕಾಗಿ ಜನಧ್ವನಿ ಜಾಥಾದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ತಂದಿರುವ ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕರಿಗೆ ಅನ್ಯಾಯವಾದರೆ ಅದರ ವಿರುದ್ಧ ದ್ವನಿ ಎತ್ತುವ ಅಥವಾ ಪ್ರತಿಭಟನೆ ಮಾಡುವ ಅವಕಾಶ ಇಲ್ಲ. ಎಷ್ಟು ಬೇಕಾದರೂ ಶೋಷಣೆ ಮಾಡಬಹುದು ಎನ್ನುದನ್ನು ಕಾರ್ಮಿಕ ಸಂಹಿತೆಗಳು ಹೇಳುತ್ತವೆ. ಕಾರ್ಮಿಕರಿಗೆ ರಕ್ಷಣೆ ಕೊಡದೇ ಇರುವ ಸಂಹಿತೆಗೆ ಕಾರ್ಮಿಕ ಸಂಹಿತೆ ಎಂದು ಹೆಸರು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡದಿರಲು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರಕಾರ ಘೋಷಿಸಿದೆ. ಕಾರ್ಮಿಕ ಹಕ್ಕು ಎನ್ನುವುದು ಬಿಕ್ಷೆ ಅಲ್ಲ, ಕಾರ್ಮಿಕರು ಹೋರಾಟದ ಮೂಲಕ ಪಡೆದುಕೊಂಡ ಹಕ್ಕು ಎಂದು ಕೇರಳ ಸರಕಾರ ಹೇಳಿದೆ. ಕರ್ನಾಟಕ ರಾಜ್ಯ ಸರಕಾರ ಯಾಕೆ ಕೇರಳ ಮಾದರಿಯಲ್ಲಿ ಕೇಂದ್ರದ ಕಾರ್ಮಿಕ ಸಂಹಿತೆ ವಿರುದ್ಧ ನಿಲುವು ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯದ ವಿಧಾನಸಭೆಯಲ್ಲಿ ಕಾರ್ಮಿಕ ಸಂಹಿತೆಯ ಬಗ್ಗೆ ಚರ್ಚೆಯೇ ಆಗಿಲ್ಲ. ಕಾರ್ಮಿಕ ಮತ್ತು ಆರ್ಥಿಕ ನೀತಿಗಳಲ್ಲಿ ಕಾಂಗ್ರೆಸ್ ಗೂ ಬಿಜೆಪಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದರ್ಥ” ಎಂದು ಮೀನಾಕ್ಷಿ ಸುಂದರಂ ಹೇಳಿದರು.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಮಾತನಾಡಿ, ಪರ್ಯಾಯ ರಾಜಕಾರಣವೆಂದರೆ ನೀತಿಗಳ ಬದಲಾವಣೆಯೇ, ಹೊರತು ಸರಕಾರ ಅಥವಾ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಪರ್ಯಾಯವಲ್ಲ. ಕೃಷಿ ಬಿಕ್ಕಟ್ಟು ಇಡೀ ದೇಶದ ದೊಡ್ಡ ಸಮಸ್ಯೆಯಾಗಿದೆ. ಕೃಷಿ ವಲಯ ಬಂಡವಾಳಶಾಹಿಗಳ ಪಾಲಾಗಿದೆ. ಭೂಸ್ವಾಧೀನ ಕಾಯ್ದೆಗಳನ್ನು ಅತ್ಯಂತ ಕೆಟ್ಟದಾಗಿ ಜಾರಿ ಮಾಡಲಾಗುತ್ತಿದೆ. ಬ್ರಿಟಿಷ್ ಕಾಲದ ಬಂಡವಾಳಶಾಹಿ ಜಮೀನ್ದಾರಿಕೆ ಚಾಲ್ತಿಯಲ್ಲಿದೆ. ರೈತರಿಂದ ಭೂಮಿ ಕಿತ್ತು ಕಂಪೆನಿಗಳಿಗೆ ಕೊಡುವ ರಾಜ್ಯ-ಕೇಂದ್ರ ಸರಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು, ರೈತ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರಕಾರಗಳು ರೈತರ ಸಮಸ್ಯೆ ಬಗೆಹರಿಸುತ್ತಿಲ್ಲ, ಬದಲಾಗಿ ಹೆಚ್ಚಿಸಿವೆ. ಕಾರ್ಮಿಕ ಕಾಯ್ದೆಗಳು ಕಾರ್ಮಿಕರ ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ. ಅತ್ಯಂತ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರಕಾರ ಜಾರಿ ಮಾಡುತ್ತಿದೆ. ಬಿಜೆಪಿ ಸರಕಾರದಲ್ಲಿ ಉದ್ಯೋಗ ಸೃಷ್ಟಿಯ ಯೋಜನೆಗಳೇ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗೆ ಉದ್ಯೋಗದ ಬಗ್ಗೆ ಯೋಜನೆ-ಯೋಚನೆಗಳೇ ಇಲ್ಲ. 30 ಸಾವಿರ ರೂಪಾಯಿಯ ಕನಿಷ್ಟ ಕೂಲಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಿರುದ್ಯೋಗಿ ಯುವ ಜನರ ಜೊತೆಯಲ್ಲಿ ನಾವು ನಿಲ್ಲಬೇಕಿದೆ ಎಂದರು.
ಇದೇ ವೇಳೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮಾಕ್ರ್ಸ್‍ವಾದಿ(ಸಿಪಿಐಎಂ) ಪಾಲಿಟ್ ಬ್ಯುರೋ ಸದಸ್ಯೆ ಯು.ವಾಸುಕಿ, ಹೋರಾಟಗಾರರಾದ ಶ್ರೀರಾಮ್, ಜಿ.ಎನ್.ನಾಗರಾಜ್, ಎಸ್.ವರಲಕ್ಷ್ಮೀ, ಕೆ.ನೀಲಾ, ಸಾತಿ ಸುಂದರೇಶ್, ಮತ್ತಿತರರು ಹಾ