×
Ad

Bengaluru | ಬುದ್ಧಿವಾದ ಹೇಳಿದ್ದಕ್ಕೆ ಮಹಿಳಾ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವತಿ!

Update: 2026-01-11 22:28 IST

ಬೆಂಗಳೂರು : ಇಲ್ಲಿನ ಕೆ.ಆರ್.ಪುರಂ ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕವಾಗಿ ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು, ಟ್ರಾಫಿಕ್ ಕರ್ತವ್ಯದಲ್ಲಿದ್ದ ಮಹಿಳಾ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿರುವ ಘಟನೆ ರವಿವಾರ ನಡೆದಿದೆ.

ಗಾಯಗೊಂಡ ಹೋಂ ಗಾರ್ಡ್ ಲಕ್ಷ್ಮೀ ನರಸಮ್ಮ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ಮಾಡಿದ ಮೋಹಿನಿ ಎಂಬ ಯುವತಿಯನ್ನು ರಾಮಮೂರ್ತಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

12 ವರ್ಷಗಳಿಂದ ಹೋಂ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀನರಸಮ್ಮ, ಹಿಂದಿನ ಆರು ತಿಂಗಳಿಂದ ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಂತ್ರಣದ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವತಿ ರಸ್ತೆಯಲ್ಲಿ ಓಡಾಡುತ್ತಿದ್ದಾಗ, ಅಲ್ಲಿ ಸೇರಿದ್ದ ಕೆಲವು ಯುವಕರು ಆಕೆಯನ್ನು ಚುಡಾಯಿಸುತ್ತಿದ್ದರು. ಸ್ಥಳದಲ್ಲಿದ್ದ ಸಾರ್ವಜನಿಕರು ಈ ಬಗ್ಗೆ ಗಮನ ಹರಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ, ಲಕ್ಷ್ಮೀನರಸಮ್ಮ ಅವರು ‘ಈ ರೀತಿ ಬಟ್ಟೆ ಧರಿಸಿ ರಸ್ತೆಗೆ ಬರಬೇಡಮ್ಮ’ ಎಂದು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ.

ಬುದ್ಧಿವಾದ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡ ಯುವತಿ, ನನಗೆ ಹೇಳಲು ನೀನು ಯಾರು?; ಎಂದು ಏಕಾಏಕಿ ಲಕ್ಷ್ಮೀನರಸಮ್ಮ ಅವರ ಮೇಲೆರಗಿದ್ದಾಳೆ ಎನ್ನಲಾಗಿದೆ. ಸಮವಸ್ತ್ರದಲ್ಲಿದ್ದ ಹೋಂ ಗಾರ್ಡ್ ಮುಖಕ್ಕೆ ಹೊಡೆದು, ಮೈಮೇಲೆ ಪರಚಿ ಗಾಯಗೊಳಿಸಿದ್ದಾಳೆ. ಸ್ಥಳದಲ್ಲಿದ್ದವರು ಗಲಾಟೆ ಬಿಡಿಸಲು ಮುಂದಾದರೂ ಯಾರಿಗೂ ಕ್ಯಾರೇ ಎನ್ನದೆ ರಂಪಾಟ ಮಾಡಿದ್ದಾಳೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಲಕ್ಷ್ಮೀನರಸಮ್ಮ, ‘ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೆ. ಆ ಯುವತಿ ನಿತ್ಯ ಮದ್ಯಪಾನ ಮಾಡಿ ಅಲೆದಾಡುತ್ತಿರುವುದನ್ನು ಈ ಹಿಂದೆಯೂ ನೋಡಿದ್ದೆ. ಜನರ ಒತ್ತಾಯಕ್ಕೆ ಮಣಿದು ಬುದ್ಧಿವಾದ ಹೇಳಿದ್ದಕ್ಕೆ ನನ್ನ ಮೇಲೆ ಈ ರೀತಿ ದೌರ್ಜನ್ಯ ನಡೆದಿದೆ. ಹಲ್ಲೆ ಮಾಡಿದವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಮತ್ತು ಕರ್ತವ್ಯದಲ್ಲಿರುವ ನಮಗೆ ರಕ್ಷಣೆ ಸಿಗಬೇಕು ಎಂದು ಹೇಳಿದ್ದಾರೆ.

ಈ ಸಂಬಂಧ ಮಹಿಳಾ ಸಂಘಟನೆಗಳ ದೂರಿನ ಮೇರೆಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆರೋಪಿ ಮೋಹಿನಿಯನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News