×
Ad

Bengaluru | ‘ಶಿವಲೀಲಾ’ ಚಿತ್ರಕ್ಕೆ ಚಿತ್ರಮಂದಿರಗಳನ್ನು ನೀಡದೆ ಅನ್ಯಾಯ ಆರೋಪ: ಪ್ರತಿಭಟನೆ

Update: 2026-01-12 00:25 IST

ಬೆಂಗಳೂರು : ಲಿಂಗತ್ವ ಅಲ್ಪಸಂಖ್ಯಾತರ ಕುರಿತಾದ ಕಥೆಯನ್ನು ಹೊಂದಿರುವ ‘ಶಿವಲೀಲಾ’ ಚಿತ್ರಕ್ಕೆ ಚಿತ್ರಮಂದಿರಗಳನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಚಿತ್ರತಂಡದ ಕಲಾವಿದರು ಹಾಗೂ ಬಿಜೆಪಿ ಕಾರ್ಯಕರ್ತರು ರವಿವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ನಿರ್ದೇಶಕ ಅಶೋಕ್ ಜೈರಾಮ್ ಮಾತನಾಡಿ, ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸಾಮಾನ್ಯರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕುವ ಬಲವಾದ ಪ್ರಯತ್ನವಿದು. ರಾಜ್ಯದ ಮೂರು ಚಿತ್ರಮಂದಿರಗಳಲ್ಲಿ ತಲಾ ಒಂದು ಪ್ರದರ್ಶನ ಮಾತ್ರ ನೀಡಲಾಗಿದೆ. ಶಾಲಾ, ಕಾಲೇಜು ಮಕ್ಕಳು ಕಡ್ಡಾಯವಾಗಿ ಈ ಚಿತ್ರ ನೋಡಲು ಸುತ್ತೋಲೆ ಹೊರಡಿಸಬೇಕು ಎಂದರು.

ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಮಂಗಳಮುಖಿಯವರ ಜೀವನ ನರಕವಾಗಿದೆ. ಮನೆಯಲ್ಲೂ ಅವರನ್ನು ಸೇರಿಸುವುದಿಲ್ಲ. ಹಾಗಾಗಿ ಅವರು ಎಲ್ಲಿ ಬದುಕಬೇಕು? ಅವರ ಜೀವನ ಕುರಿತ ಚಿತ್ರ ವೀಕ್ಷಿಸಲು ಚಿತ್ರಮಂದಿರ ಕೊಡುತ್ತಿಲ್ಲ. ಈ ಸಂಬಂಧ ಸರಕಾರವೇ ಸುತ್ತೋಲೆ ಹೊರಡಿಸಿ, ಮಕ್ಕಳು, ಪೋಷಕರು, ಸರಕಾರಿ ನೌಕರರು ವೀಕ್ಷಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಭಾರತಿ ಶೆಟ್ಟಿ ಮಾತನಾಡಿ, ಮುಂಗಳಮುಖಿಯರು ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಕಾನೂನು ಬದಲಾವಣೆ ಮಾಡಿಯಾದರೂ ಮೀಸಲಾತಿ ನೀಡಿ, ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದರು.

ಮನವಿ ಸ್ವೀಕರಿಸಲು ಯಾರೂ ಬಾರದ ಕಾರಣ ಸಿಎಂ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಲಾವಿದರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಸಿಎಆರ್ ಕೇಂದ್ರಕ್ಕೆ ಬಸ್‌ನಲ್ಲಿ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ವೈ.ಸಂಪಂಗಿ, ಮಂಜುಳಾ ಹಾಗೂ ಜಾನಪದ ಕಲಾವಿದೆ ಜೋಗತಿ ಮಂಜಮ್ಮ, ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News