×
Ad

ಡಾಲರ್‌ನ ಮೌಲ್ಯ 90 ರೂ.ಗೆ ತಲುಪಿರುವುದಕ್ಕಿಂತ ಅವಮಾನಬೇಕೇ? : ರಮೇಶ್ ಕುಮಾರ್

‘ಸೌಹಾರ್ದ ಭಾರತ-ಸಮಾನತೆಯ ಸ್ನೇಹಿತ’ ಕೃತಿಯ ಜನಾರ್ಪಣೆ ಸಮಾರಂಭ

Update: 2026-01-10 23:40 IST

ಬೆಂಗಳೂರು : ಒಂದು ಅಮೆರಿಕನ್ ಡಾಲರ್‌ನ ಮೌಲ್ಯವು 90 ರೂಪಾಯಿಗೆ ತಲುಪಿದ್ದು, ಭಾರತಮಾತೆಗೆ ಇದಕ್ಕಿಂತ ಅವಮಾನಬೇಕೇ? ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ಶನಿವಾರ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜನ ಪ್ರಕಾಶನ, ಸೌಹಾರ್ದ ಕರ್ನಾಟಕ ಮತ್ತು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ-ಸಮಾನತೆಯ ಸ್ನೇಹಿತ’ ಕೃತಿಯ ಜನಾರ್ಪಣೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಆರೆಸ್ಸೆಸ್‍ನವರು ಭಾರತಮಾತೆ, ಸಂಸ್ಕೃತಿ, ಹಿಂದೂ ಧರ್ಮ, ವಿವೇಕಾನಂದರನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ವಿವೇಕಾನಂದರು ಕೋಲ್ಕತ್ತಾದಲ್ಲಿ ಇಲ್ಲ, ಕನ್ಯಾಕುಮಾರಿಯಲ್ಲಿಯೂ ಇಲ್ಲ. ಕೊನೆಗೆ ಅವರು ಚಾಮರಾಜಪೇಟೆಯ ಕೇಶವಕೃಪಾದಲ್ಲಿದ್ದಾರೆ ಎಂದು ಗೊತ್ತಾಗಿದೆ. ಭಗತ್ ಸಿಂಗ್‍ಗೆ ಬಲವಂತವಾಗಿ ಜನಿವಾರವನ್ನು ಹಾಕಿದ್ದಾರೆ. ಹೀಗೆ ನಮ್ಮ ಪ್ರತಿರೋಧಿಗಳು, ಮತಾಂಧರು ಸುಳ್ಳನ್ನು ಸತ್ಯ ಮಾಡುವಲ್ಲಿ ನಿಸ್ಸೀಮರಾಗಿದ್ದಾರೆ. ಆದರೆ ಸತ್ಯವನ್ನು ಹೇಳಲು ಆಗದ ಸ್ಥಿತಿಯಲ್ಲಿ ನಾವು ಇದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಸೌಹಾರ್ದತೆಯ ಹಾಗೂ ಸಮಾನತೆಯ ಆಶಯಗಳು ಯುವಜನರಿಗೆ ತಲುಪಬೇಕು ಎಂದು ಏಕಕಾಲದಲ್ಲಿಯೇ 23 ಊರುಗಳಲ್ಲಿ ಕೃತಿ ಲೋಕಾರ್ಪಣೆಯಾಗುತ್ತಿದೆ. 20ನೇ ಶತಮಾನದಲ್ಲಿ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವು. 21ನೇ ಶತಮಾನದಲ್ಲಿ ಸೌಹಾರ್ಧತೆಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದರು.

ಇಂದು ಏಕಕಾಲಕ್ಕೆ ಮನುವಾದ ಮತ್ತು ಬಂಡವಾಳವಾದ ಇದೆ. ಇವನ್ನು ಎದುರಿಸಬೇಕಾಗಿದೆ. ಸಮಸ್ಯೆ ಸಂಕೀರ್ಣವಾಗಿದ್ದು, ಪರಿಹಾರ ಸರಳವಾಗಿರುವುದಿಲ್ಲ ಎಂದ ಅವರು, ಸೌಹಾರ್ದತೆ ಎಂದರೆ ಪಕ್ಷಪಾತ, ಪಕ್ಷ ರಾಜಕೀಯವಲ್ಲ, ಪೂರ್ವಗ್ರಹವಲ್ಲ. ಅವಿವೇಕತೆಯನ್ನು ಮೀರಿದ ವಿವೇಕದ ಹಾದಿಯಾಗಿದೆ. ಸತ್ಯ, ಅಹಿಂಸೆ, ಸಮಾನತೆ ಇದ್ದರೆ ಮಾತ್ರ ಸೌಹಾರ್ದತೆ ಜನರನ್ನು ತಲುಪುತ್ತದೆ ಎಂದು ಹೇಳಿದರು.

ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿ ಕುಲಪತಿ ಡಾ.ಬಿ.ರಮೇಶ್ ಮಾತನಾಡಿ, ಧರ್ಮ, ಭಾಷೆ, ಗಡಿ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿದ್ದು, ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ. ಅದಕ್ಕೆ ಔಷಧಿ ಎಂಬಂತೆ ಈ ಕೃತಿಯನ್ನು ರಚನೆ ಮಾಡಲಾಗಿದೆ. ಪ್ರಾಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ, ಚಳುವಳಿಗಾರರಿಗೆ ಈ ಕೃತಿ ಅನುಕೂಲವಾಗಿದೆ. ಸೌಹಾರ್ದ ಹಾಳು ಮಾಡುವವರ, ಅವರ ಸಂಘಟನೆಗಳ ಬಗ್ಗೆ ಈ ಕೃತಿಯಲ್ಲಿ ಮಾಹಿತಿ ಇದೆ ಎಂದರು.

ಲೇಖಕಿ ಎಚ್.ಎಲ್. ಪುಷ್ಪ ಮಾತನಾಡಿ, ತಂದೆಯೇ ಮಗಳನ್ನು ಕೊಲ್ಲುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣಗೊಂಡಿದೆ. ಸಂವಿಧಾನದ ಉಳಿವಿಗಾಗಿ ಬೀದಿಗೆ ಬಂದು ಮಾತನಾಡುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಅಮೇರಿಕ ದೇಶವು ವೆನಿಝುವೆಲಾ ದೇಶದ ಮೇಲೆ ದಾಳಿ ಮಾಡಿದೆ. ಇಂತಹ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿ ಅರ್ಥ ಪೂರ್ಣವಾಗಿದೆ ಎಂದರು.

ಸಮಾರಂಭದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ-ಸಮಾನತೆಯ ಸ್ನೇಹಿತ’ ಕೃತಿ ಜನಾರ್ಪಣೆ ಮಾಡಲಾಯಿತು. ದಲಿತ ಮುಖಂಡ ಮಾವಳ್ಳಿ ಶಂಕರ್, ಮೋಹನ್ ರಾಜ್, ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News