Bengaluru | ಹತ್ಯೆಯಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ; ಮನೆಗೆಲಸಗಾರನೂ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಹತ್ಯೆಗೊಳಗಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮನೆ ಕೆಲಸದ ವ್ಯಕ್ತಿಯೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿಲ್ಕ್ ಬೋರ್ಡ್ ಸಮೀಪದ ಕೆಎಎಸ್ ಕಾಲೋನಿಯಲ್ಲಿ ಜ.31ರ ತಡರಾತ್ರಿ ವರದಿಯಾಗಿದೆ.
ಸುಮಾರು 65 ವರ್ಷದ ಮಹಿಳೆ ಮನೆಯ ಕೊಠಡಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಅದೇ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ದೇವರಾಜು(50) ಎಂಬಾತ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದೇಶಕ್ಕೆ ತೆರಳಿದ್ದ ಮಹಿಳೆಯ ಪತಿ ಫೆ.1ರ ಮುಂಜಾನೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಈ ಘಟನೆಯ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಬೆಂಗಳೂರು ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯಿಸಿ, ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದ ಮೃತಳ ಪತಿ ಮುಂಜಾನೆ ಫೆ.1ರ ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ಮಹಡಿಯಲ್ಲಿ ಇದ್ದ 27 ವರ್ಷದ ಮಗಳು ಬಂದು ಬಾಗಿಲು ತೆರೆದು ತನ್ನ ಕೋಣೆಗೆ ತೆರಳಿದ್ದಳು.
ಬಳಿಕ ಪತಿ ಕೆಳ ಮಹಡಿಯಲ್ಲಿದ್ದ ಕೊಠಡಿಗೆ ತೆರಳಿದಾಗ ಪತ್ನಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಕೆಲಸಗಾರ ದೇವರಾಜ್ ಸಹ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಘಟನೆ ನಡೆದ ಸಮಯದಲ್ಲಿ ಮನೆಯ ಮೊದಲ ಮಹಡಿಯಲ್ಲಿ ಮಗಳಿದ್ದರೂ ಆಕೆಗೆ ಗಮನಕ್ಕೆ ಬಾರದೇ ಕೃತ್ಯ ನಡೆದಿದೆ. ಹತ್ಯೆ ಹೇಗೆ ನಡೆದಿದೆ? ಆತ್ಮಹತ್ಯೆಗೆ ಮಾಡಿಕೊಂಡ ಕೆಲಸಗಾರನೇ ಕೃತ್ಯ ಎಸಗಿದ್ದಾನಾ? ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.