×
Ad

ಬ್ಯಾರಿ ಸಮುದಾಯದ ಅಭಿವೃದ್ಧಿಗೆ ಅಗತ್ಯ ಸಹಕಾರ : ಸಚಿವ ದಿನೇಶ್ ಗುಂಡೂರಾವ್

ಬ್ಯಾರೀಸ್ ಸೆಂಟ್ರಲ್ ಕಮಿಟಿ ವತಿಯಿಂದ ʼಬ್ಯಾರಿ ಕೂಟ-2026ʼ

Update: 2026-02-01 21:27 IST

ಬೆಂಗಳೂರು : ‘ಪ್ರಸ್ತುತ ಕಾಲದಲ್ಲಿ ಬ್ಯಾರಿ ಸಮುದಾಯವು ಎಲ್ಲೆಡೆಗೆ ವಿಸ್ತರಣೆಗೊಂಡಿದ್ದು, ಆಸ್ಪತ್ರೆ, ಹೊಟೇಲ್, ವ್ಯಾಪಾರ ಸಹಿತ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಉನ್ನತಮಟ್ಟದ ಶಿಕ್ಷಣ ನೀಡಲು ಬ್ಯಾರಿ ಸಮುದಾಯದ ಶಿಕ್ಷಣ ಸಂಸ್ಥೆಗಳ ಪಾತ್ರವು ಇದ್ದು, ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುತ್ತಿರುವುದು ಸಮುದಾಯದ ಕೀರ್ತಿಯನ್ನು ಹೆಚ್ಚಿಸಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್‍ನಲ್ಲಿ ‘ಬ್ಯಾರೀಸ್ ಸೆಂಟ್ರಲ್ ಕಮಿಟಿ’ಯಿಂದ ಆಯೋಜಿಸಿದ್ದ ಎರಡನೇ ವರ್ಷದ ಬ್ಯಾರಿ ಕೂಟ-2026ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರಕಾರವು ಬ್ಯಾರಿ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಸರ್ವ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೆಎಮ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಶೇಖ್ ಲತೀಫ್ ಮಾತನಾಡಿ, ‘ರಾಜ್ಯ ಸರಕಾರವು ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಈ ಯೋಜನೆಗಳನ್ನು ಸಮುದಾಯದ ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ನೌಫಲ್ ಎಂ ಮತ್ತು ಕಂಪೆನಿಯ ಸಿಎ ನೌಫಲ್ ಹಾಗೂ ಬ್ಯಾರಿ ಸಮುದಾಯದ ಉದ್ಯಮಿಗಳಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸವಾದ್ ಸ್ವಾಗತಿಸಿದರು, ತನ್ಸೀಫ್ ಬಿ.ಎಂ ನಿರೂಪಿಸಿದರು.

ಧ್ವಜಾರೋಹಣ: ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಅವರು ಧ್ವಜರೋಹಣ ಮಾಡುವುದರ ಮೂಲಕ ಬ್ಯಾರಿ ಕೂಟ-2026 ಚಾಲನೆ ನೀಡಲಾಯಿತು. ಈ ವೇಳೆ ಬ್ಯಾರೀಸ್ ಕಮಿಟಿಯ ಅಧ್ಯಕ್ಷ ಶಬೀರ್ ಬ್ರಿಗೇಡ್ ಸಹಿತ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳು: ‘ಕುಕ್ಕಿಂಗ್ ವಿದೌಟ್ ಫೈರ್, ಮಹಿಳೆಯರಿಗೆ ಮೆಹಂದಿ, ಕ್ಯಾಲಿಗ್ರಾಫಿ, ಚಿರಿಕಲಿ ಸಹಿತ ಹಲವು ಸ್ಪರ್ಧೆಗಳು ಸ್ಥಳದಲ್ಲಿ ನಡೆದವು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗಮನ ಸೆಳೆದ ವಸ್ತುಪ್ರದರ್ಶನ: ಬ್ಯಾರಿ ಸಮುದಾಯದ ಕಲೆ, ಸಂಸ್ಕೃತಿಯನ್ನು ನೆನಪಿಸುವಂತಹ ಬ್ಯಾರಿ ವಸ್ತುಪ್ರದರ್ಶನವು ಜನರನ್ನು ಸೆಳೆಯುತ್ತಿದ್ದವು.

ವಿವಿಧ ಕಾರ್ಯಕ್ರಮ: ಬ್ಯುಸಿನೆಸ್ ಎಕ್ಸ್‌ ಪೊ, ಬ್ಯಾರಿ ಫುಡ್ ಫೆಸ್ಟ್, ಕಿಡ್ಸ್‌ ಝೋನ್, ಬ್ಯಾರಿ ನಾಟಕ, ಒಪ್ಪನೆಪಾಟ್, ಬ್ಯಾರಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ವಿತರಣೆ ಕಾರ್ಯಕ್ರಮ ನಡೆಯಿತು.

‘ಬ್ಯಾರಿ ಕೂಟ ಮಾಡುವುದರಿಂದ ಉದ್ಯೋಗ ಸೃಷ್ಠಿಯಾಗುತ್ತದೆ. ಜನರು ಪರಸ್ಪರ ಸಂಪರ್ಕ ಮಾಡಿಕೊಳ್ಳುವಂತಾಗುತ್ತದೆ. ಆರಂಭಿಕ ಕಂಪೆನಿಗಳ ಬಗ್ಗೆ ಯುವ ಸಮೂಹಕ್ಕೆ ಮಾಹಿತಿ ನೀಡುವುದು ಉತ್ತಮ ಕಾರ್ಯ. ಇದರಿಂದ ಯುವ ಸಮೂಹ ಉದ್ಯಮ ಸೃಷ್ಠಿ ಮಾಡಲು ಸಹಕಾರಿಯಾಗುತ್ತದೆ. ಬ್ಯಾರಿ ಸಮುದಾಯದ ಉದ್ಯಮಿಗಳು ಯುವ ಸಮೂಹಕ್ಕೆ ಬೆಂಬಲಿಸಬೇಕಾಗಿದೆ. ನನ್ನ ಕಂಪೆನಿಯಲ್ಲಿ ಬ್ಯಾರಿ ಸಮುದಾಯದ 2000ದಷ್ಟು ಕೆಲಸಗಾರರು ಇದ್ದಾರೆ. ಬ್ಯಾರಿ ಸಮುದಾಯದವರು ಒಗ್ಗಟ್ಟು, ಸೌಹಾರ್ದತೆಯೊಂದಿಗೆ ಮುನ್ನಡೆಯಬೇಕು’

-ಝಕರಿಯಾ ಜೋಕಟ್ಟೆ, ಸೌದಿ ಅರೇಬಿಯಾ ಜುಬೈಲ್‍ನ ಅಲ್ ಮುಝೈನ್ ಕಂಪೆನಿ ಸಂಸ್ಥಾಪಕರು









 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News