ಕೇಂದ್ರ ಸರಕಾರ ಬಜೆಟ್‍ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್
ಕನಕಪುರ : ಕೇಂದ್ರ ಸರಕಾರದ ಬಜೆಟ್‍ನಲ್ಲಿ ರಾಜ್ಯಕ್ಕೆ ಯಾವುದೆ ಕೊಡುಗೆ ಕೊಟ್ಟಿಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ಯಾವ ಅನುಕೂಲವೂ ಆಗಿಲ್ಲ. ಬೆಂಗಳೂರಿಗೆ ಹೈಸ್ಪೀಡ್ ರೈಲು ಎಂದು ಹೇಳಿದ್ದಾರೆ. ಆದರೆ, ಯಾವ ಹೈಸ್ಪೀಡ್ ರೈಲೂ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರವಿವಾರ ಕನಕಪುರದಲ್ಲಿ ಕೇಂದ್ರ ಸರಕಾರದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಹೈಸ್ಪೀಡ್ ರೈಲು ಯೋಜನೆ ಕೇಂದ್ರ ಹಾಗೂ ರಾಜ್ಯ ಸರಕಾರದ ಶೇ.50:50 ಅನುದಾನ ಪ್ರಮಾಣದಲ್ಲಿ ಅನುಷ್ಠಾನ ಮಾಡುವುದು ಸಾಧ್ಯವಿಲ್ಲ. ಕೇಂದ್ರ ಸರಕಾರ ಈ ಯೋಜನೆಗೆ ಶೇ.90 ಹಾಗೂ ರಾಜ್ಯದ ಪಾಲು ಶೇ.10ರಷ್ಟು ನಿಗದಿ ಮಾಡಿದರೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದು ಹೇಳಿದ್ದರು. ಬಜೆಟ್ ನಲ್ಲಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆ ಸಿಗುವ ನಿರೀಕ್ಷೆ ಇತ್ತು. ಆದರೆ, ಯಾವುದೆ ಗುರುತರವಾದ ಕೊಡುಗೆಯನ್ನು ನೀಡಿಲ್ಲ ಎಂದು ಶಿವಕುಮಾರ್ ಹೇಳಿದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯ ಬದಲಾಗಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ ಅನುಪಾತ ಶೇ.60:40 ಹಂಚಿಕೆಯಿಂದ ಜಾರಿಗೊಳಿಸಲು ಸಾಧ್ಯವೇ ಇಲ್ಲ. ರಾಜ್ಯ ಸರಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದರಿಂದ ಯಾವ ಸರಕಾರಗಳು ಬಂಡವಾಳ ಹಾಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ವಲಯದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಬಳಕೆಗೆ ಬಜೆಟ್‍ನಲ್ಲಿ ಒತ್ತು ನೀಡಿರುವ ಕುರಿತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಮನರೇಗಾ ಯೋಜನೆಗೂ ಎಐ ಬಳಕೆ ಮಾಡಿ ಕೂಲಿ ತೀರ್ಮಾನ ಮಾಡುತ್ತೇವೆ ಎಂದಿದ್ದರು. ವ್ಯವಸಾಯದ ಕಾಲದಲ್ಲಿ ಕೂಲಿ ಕೊಡಲಿಲ್ಲ. ಈಗ ಎಐ ಬಳಕೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ, ವ್ಯವಸಾಯಕ್ಕೆ ಯಾವ ಪ್ರಯೋಜನವೂ ಇಲ್ಲ ಎಂದು ಟೀಕಿಸಿದರು.
ಪ್ರಗತಿ ಆಧಾರಿತ, ಜನಕೇಂದ್ರಿತ ಆಯವ್ಯಯ: ಪ್ರಹ್ಲಾದ್ ಜೋಶಿ
ಕೇಂದ್ರ ಬಜೆಟ್ 2026-27ರ ಆರ್ಥಿಕ ಮುನ್ನೋಟವು ಪ್ರಧಾನಿ ಮೋದಿಯವರ ‘ವಿಕಸಿತ ಭಾರತ’ ಕನಸಿಗೆ ಪೂರಕ ಮತ್ತು ಭವ್ಯ ಭಾರತದ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿದೆ. ಇದು ಭಾರತದ ಬೆಳವಣಿಗೆ ಕೇಂದ್ರಿತ ಬಜೆಟ್ ಆಗಿದ್ದು, ಏಳು ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದನಾ ಸಾಮಥ್ರ್ಯ ಬಲಪಡಿಸುವಿಕೆ ಮೇಲೆ ಕೇಂದ್ರೀಕೃತವಾಗಿದೆ. ವ್ಯವಹಾರ ಪ್ರಕ್ರಿಯೆಗಳ ಸರಳೀಕರಣ, ಸಹಕಾರಿ ಕ್ಷೇತ್ರಕ್ಕೆ ಹೊಸ ಕಾರ್ಯಕ್ರಮಗಳು ಮತ್ತು ಐಟಿ ಕ್ಷೇತ್ರಕ್ಕೆ ಬಲವಾದ ನೀತಿ ಈ ಬಜೆಟ್‍ನ ಪ್ರಮುಖ ಅಂಶಗಳು. ಒಟ್ಟಿನಲ್ಲಿ ಸಾಮಾನ್ಯ ನಾಗರಿಕರ ಮೇಲೆ ಯಾವುದೇ ಹೆಚ್ಚುವರಿ ತೆರಿಗೆ ಭಾರ ಹಾಕದೇ, ಸಮತೋಲನ ಮತ್ತು ನವೀನತೆಯಿಂದ ಕೂಡಿದ ಈ ಬಜೆಟ್ ಭಾರತವನ್ನು ಅಭಿವೃದ್ಧಿಶೀಲ ಮತ್ತು ಆತ್ಮನಿರ್ಭರ ಭವಿಷ್ಯದತ್ತ ದೃಢ ಸಂಕಲ್ಪದೊಂದಿಗೆ ಕೊಂಡೊಯ್ಯುತ್ತದೆ’
‘ತೆಂಗು ಹಾಗೂ ಗೋಡಂಬಿ ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ. ಟೆಕ್ಸ್ ಟೆಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಮತ್ತು ರಫ್ತು ಹೆಚ್ಚಳಕ್ಕೆ ಒತ್ತು. ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ. 2047ರ ವೇಳೆಗೆ ಜಾಗತಿಕ ಐಟಿ ಕ್ಷೇತ್ರದಲ್ಲಿ ಭಾರತದ ಪಾಲು ಶೇ.10ಕ್ಕೆ ಏರಿಸುವ ಗುರಿ - ಇದರಿಂದ ಬೆಂಗಳೂರಿನಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ. ಉತ್ತರ ಭಾರತದಲ್ಲಿ ಹೊಸ ನಿಮ್ಹಾನ್ಸ್ ಸ್ಥಾಪನೆ - ಇದರಿಂದ ಸ್ಥಳೀಯರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಲಭ್ಯ. ಒಟ್ಟಾರೆಯಾಗಿ ರೈತರಿಂದ ಹಿಡಿದು ಐಟಿ ವೃತ್ತಿಪರರವರೆಗೆ ಎಲ್ಲರನ್ನೂ ಒಳಗೊಂಡ ಭವಿಷ್ಯದ ಬಜೆಟ್ ಇದಾಗಿದೆ’
-ತೇಜಸ್ವಿ ಸೂರ್ಯ, ಸಂಸದ