Bengaluru | ನಕಲಿ ದಾಖಲೆ ಸೃಷ್ಟಿಸಿ ಸಹಕಾರಿ ಬ್ಯಾಂಕಿನಿಂದ 70 ಲಕ್ಷ ರೂ.ಸಾಲ ಪಡೆದು ವಂಚನೆ ಆರೋಪ : ಮೂವರ ವಿರುದ್ಧ ಎಫ್‍ಐಆರ್
ಬೆಂಗಳೂರು : ನಿವೇಶನ ಇರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಹಕಾರಿ ಬ್ಯಾಂಕಿನಿಂದ 70ಲಕ್ಷ ರೂ.ಸಾಲ ಪಡೆದು ಕಂತು ಪಾವತಿಸದೆ ವಂಚಿಸಿದ ಆರೋಪದಡಿ ಸಾಲಗಾರ ಹಾಗೂ ಹಿಂದಿನ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಹಿತ ಮೂವರ ವಿರುದ್ಧ ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಡಿ.ಆರ್. ಎಂಬುವರು ನೀಡಿದ ದೂರಿನನ್ವಯ ಸಾಲ ಪಡೆದಿದ್ದ ಪ್ರಕಾಶ್, ಎಚ್.ರಘು ಎಂ.ಆರ್. ಹಾಗೂ ಅಂದಿನ ಶಾಖಾ ವ್ಯವಸ್ಥಾಪಕ(ಪ್ರಭಾರ) ನಾಗರಾಜು ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಹಕಾರಿ ಬ್ಯಾಂಕ್ ಸದಸ್ಯನಾಗಿದ್ದ ಪ್ರಕಾಶ್, 2023ರಲ್ಲಿ ಒಂದು ಕೋಟಿ ರೂಪಾಯಿ ಸಾಲ ನೀಡುವಂತೆ ಅರ್ಜಿ ಹಾಕಿದ್ದರು. ಈ ಕುರಿತು ಆಡಳಿತ ಮಂಡಳಿಯು ಸಭೆ ನಡೆಸಿ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ಕಾನೂನು ಅಭಿಪ್ರಾಯಕ್ಕೆ ಒಳಪಟ್ಟು ಮಂಜೂರು ಮಾಡಿತ್ತು. ದಾಖಲಾತಿ ಪರಿಶೀಲಿಸಿ ಸಾಲ ಮಂಜೂರು ಮಾಡದಂತೆ ಬ್ಯಾಂಕಿನ ಕಾನೂನು ಸಲಹೆಗಾರ ರಮೇಶ್ ವರದಿ ನೀಡಿದ್ದರು. ಈ ವರದಿಯನ್ನು ನಾಗರಾಜ್ ಅವರು ಆಡಳಿತ ಮಂಡಳಿ ಮುಂದೆ ಪ್ರಸ್ತಾಪಿಸದೆ ಎರಡನೇ ಕಾನೂನು ವರದಿಗಾಗಿ ಮತ್ತೋರ್ವ ಕಾನೂನು ಸಲಹೆಗಾರರನ್ನು ಸಂಪರ್ಕಿಸಿ ಅವರಿಂದ ತಮಗೆ ಪೂರಕ ರೀತಿ ವರದಿ ತರಿಸಿಕೊಂಡಿದ್ದರು ಅಂದು ಆರೋಪಿಸಲಾಗಿದೆ.
ಸಾಲ ನೀಡುವಾಗ ಅರ್ಜಿದಾರರಿಂದ ಅಗತ್ಯ ದಾಖಲಾತಿ ಪಡೆಯದೆ 70 ಲಕ್ಷ ರೂ. ಸಾಲ ಮಂಜೂರು ಮಾಡಿದ್ದರು. ಸಾಲ ಪಡೆದ ಆರೋಪಿಯು ಮಾಸಿಕ ಕಂತು ಸರಿಯಾಗಿ ಕಟ್ಟದಿದ್ದಾಗ ಸಾಲ ಪಡೆಯಲು ಅಡ ಇಟ್ಟಿದ್ದ ನಿವೇಶನ ಪರಿಶೀಲನೆಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಲಾಗಿತ್ತು.
ಪರಿಶೀಲನೆ ವೇಳೆ ನಿವೇಶನವು ಅರ್ಜಿದಾರನ ಮಾಲಕತ್ವ ನಿವೇಶನ ಇಲ್ಲದಿರುವುದು ಗೊತ್ತಾಗಿದೆ. ಆರೋಪಿ ಪ್ರಕಾಶ್, ನಿವೇಶನವಿದೆ ಎಂದು ರಮೇಶ್ ಎಂಬುವರಿಂದ ನಕಲಿ ಆರ್‍ಟಿಸಿ ಸೃಷ್ಟಿಸಿದರೆ, ರಘು ಎಂಬಾತನ ಮೂಲಕ ಕ್ರಯಪತ್ರ ತಯಾರಿಸಿಕೊಂಡಿದ್ದರು. ಆರ್.ಆರ್. ನಗರದ ಜಿಬಿಎ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ನಕಲಿ ಬಿಬಿಎಂಪಿ ಖಾತಾ ಮಾಡಿಸಿಕೊಂಡು ನಿವೇಶನ ಕೊಳ್ಳಲು ಬ್ಯಾಂಕಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವುದು ಕಂಡು ಬಂದಿದೆ. ಜಾಗವೇ ಇಲ್ಲದ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ವಂಚನೆ ಮಾಡಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಪ್ರಸನ್ನ ಅವರು ಕೋರಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.