ಬೆಂಗಳೂರಲ್ಲಿ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ
ಬೆಂಗಳೂರು : ಶನಿವಾರ ಹಲವೆಡೆ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಮತ್ತು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಶಾಂತಿನಗರ, ಕೋರಮಂಗಲ, ಜಯನಗರ, ಮೆಜೆಸ್ಟಿಕ್ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ರಸ್ತೆಗಳು ಜಲಾವೃತಗೊಂಡ ಪರಿಣಾಮ ಕೆಲ ಗಂಟೆಗಳ ವಾಹನ ದಟ್ಟಣೆ ಉಂಟಾಗಿತ್ತು.
ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ಸತತ ಎರಡು ದಿನಗಳಿಂದ ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ. ಮೆಜೆಸ್ಟಿಕ್, ಕಾರ್ಪೊರೇಷನ್, ಶಾಂತಿನಗರ, ರಿಚ್‍ಮಂಡ್ ಸರ್ಕಲ್, ಕೋರಮಂಗಲ, ವಿಲ್ಸನ್ ಗಾರ್ಡನ್, ಕೆ.ಆರ್. ಮಾರ್ಕೆಟ್, ಜಯನಗರ, ಜೆ.ಪಿ. ನಗರ, ಶಿವಾನಂದ ಸರ್ಕಲ್, ಗಾಂಧಿನಗರ ಬಜಾರ್, ಲಾಲ್ ಬಾಗ್, ಚಿಕ್ಕಪೇಟೆ ಸುತ್ತಮುತ್ತ ಮತ್ತು ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಮಳೆಯ ತೀವ್ರತೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನಗಳ ಸಂಚಾರ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಹಲವೆಡೆ ವಾಹನ ದಟ್ಟನೆ ಉಂಟಾಗಿತ್ತು. ದಿಢೀರ್ ಆರಂಭವಾದ ಮಳೆಯಿಂದಾಗಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಫ್ಲೈ ಓವರ್‍ಗಳು ಮತ್ತು ಬಸ್ ನಿಲ್ದಾಣಗಳ ಕೆಳಗೆ ಆಶ್ರಯ ಪಡೆದಿದ್ದರು.
ಮಳೆಗೆ ಬೆಂಗಳೂರು-ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿಯ ರಸ್ತೆಗಳಲ್ಲಿ ಸಂಪೂರ್ಣವಾಗಿ ನೀರು ನಿಂತಿತ್ತು. ರಸ್ತೆ ಮೇಲೆ ನೀರು ನದಿಯಂತೆ ಹರಿದಿತ್ತು. ಹೆಣ್ಣೂರು-ಬಾಗಲೂರು ರಸ್ತೆಯೂ ಜಲಾವೃತವಾಗಿತ್ತು. ನ್ಯೂ ಏರ್ ಪೋರ್ಟ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಇನ್ನು ಧಾರಾಕಾರ ಮಳೆಗೆ ನಗರದ ತಗ್ಗು ಪ್ರದೇಶಗಳು ಸಂಪೂರ್ಣ ಕೆರೆಯಂತೆ ಮಾರ್ಪಟ್ಟಿತ್ತು. ಅಂಡರ್‍ಪಾಸ್‍ಗಳು ಜಲಾವೃತಗೊಂಡಿದ್ದವು. ಶಿವಾನಂದ ಸರ್ಕಲ್‍ನ ರೈಲ್ವೆ ಅಂಡರ್ ಪಾಸ್‍ನಲ್ಲಿ ನೀರು ನಿಂತಿತ್ತು. ಕೆ.ಆರ್ ಸರ್ಕಲ್‍ನಲ್ಲಿರುವ ಅಂಡರ್ ಪಾಸ್ ನಲ್ಲಿ ಕೆಲ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.