×
Ad

ಎಸ್‌ಐಆ‌ರ್ | ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಯ ತಂತ್ರ : ಶಿವಸುಂದರ್

Update: 2026-06-14 00:29 IST

ಕೋಲಾರ : ಸಂವಿಧಾನ ಜಾರಿಗೆ ಬಂದ ನಂತರ ದೇಶದಲ್ಲಿ ಎರಡು ರೀತಿಯ ಮತದಾರರ ಪರಿಷ್ಕರಣೆ ನಡೆಸಲಾಗುತ್ತಿದೆ. ಆದರೆ ಎಸ್‌ಐಆರ್ ಯಾವತ್ತೂ ನಡೆದಿರಲಿಲ್ಲ. ಬಿಜೆಪಿಯು ಶಾಶ್ವತವಾಗಿ ಗೆದ್ದು ಬರಲು ಈ ತಂತ್ರಗಾರಿಕೆ ನಡೆಸುತ್ತಿದೆ ಎಂದು ಚಿಂತಕ ಹಾಗೂ ಅಂಕಣಗಾರ ಶಿವಸುಂದರ್ ಹೇಳಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಕೋಲಾರ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಎಸ್‌ಐಆರ್ ಕುರಿತ ಜನ ಜಾಗೃತಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಎಸ್‌ಐಆರ್ ರೂಪದಲ್ಲಿ ನಮ್ಮ ಪೌರತ್ವ ಪರಿಶೀಲನೆ ನಡೆಯುತ್ತಿದೆ. ಮುಸ್ಲಿಮರು, ಮಹಿಳೆಯರು, ಆದಿವಾಸಿಗಳು, ದಲಿತರರನ್ನು ಹೊರಗಿಡಲು ಬಿಜೆಪಿ ಹುನ್ನಾರ ನಡೆಸಿದೆ. ಎಸ್‌ಐಆರ್ ನಿಲ್ಲಿಸಬೇಕು, ಷರತ್ತು ತೆಗೆಯಬೇಕೆಂದು ಒತ್ತಾಯಿಸಿ ಜೂನ್ 28ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಎಸ್‌ಐ.ಆರ್‌ನಿಂದ ಸುಮಾರು 6.5 ಕೋಟಿ ಜನರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇವರಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಆದಿವಾಸಿಗಳು ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಇಲ್ಲಿಯವರೆಗಿನ ಮಾಹಿತಿಯ ಪ್ರಕಾರ ಎಸ್‌ಐಆರ್‌ನಿಂದ ಹೊರದಬ್ಬಲ್ಪಟ್ಟವರಲ್ಲಿ ಶೇಕಡ 60ರಷ್ಟು ಮಹಿಳೆಯರಾಗಿದ್ದಾರೆ. ಇಲ್ಲಿ ಕೇವಲ ಮುಸಲ್ಮಾನರನ್ನು ಮಾತ್ರ ಮತದಾನದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿಲ್ಲ. ವ್ಯವಸ್ಥಿತವಾಗಿ ಅಸ್ಪೃಶ್ಯರು, ಆದಿವಾಸಿಗಳು ಮತ್ತು ಈ ದೇಶದ ಬಹುಸಂಖ್ಯಾತ ಮಹಿಳೆಯರನ್ನು ಮತಪಟ್ಟಿಯಿಂದ ಹೊರಗಿಡುವ ಮೂಲಕ ದೇಶದ ದ್ವಿತೀಯ ದರ್ಜೆಯ ಪೌರರಾಗಿಸುವ ತಂತ್ರಗಾರಿಕೆ ನಡೆಯುತ್ತಿದೆ ಎಂದರು.

ದಲಿತ ಸಂಘರ್ಷ ಸಮಿತಿ ಅಂತರಾಜ್ಯ ಸಂಚಾಲಕ ಎನ್ ಮುನಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದಸಂಸ ರಾಜ್ಯ ಮುಖಂಡ ಎನ್ ವೆಂಕಟೇಶ್, ರಾಜ್ಯ ಜಾನಪದ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಅನ್ವರ್ ಪಾಷಾ, ದಸಂಸ ಹಿರಿಯ ಮುಖಂಡ ಮು.ತಿಮ್ಮಯ್ಯ ಮಾತನಾಡಿದರು. ಆದಿಮ ಸಾಂಸ್ಕೃತಿಕ ಕೇಂದ್ರ ಕಾರ್ಯದರ್ಶಿ ಹ.ಮ.ರಾಮಚಂದ್ರ, ಹಿರಿಯ ಜಾನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್, ಸಲಾವುದ್ಧೀನ್ ಬಾಬು, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಹೂವರಸನಹಳ್ಳಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ದೊಡ್ಡಿ ಮುನಿಯಪ್ಪ, ಮಾರುತಿ ಪ್ರಸಾದ್ ಹಾಗೂ ಬೀರಮಾನಹಳ್ಳಿ ಆಂಜಿನಪ್ಪ, ಬಂಗವಾದಿ ನಾರಾಯಣಪ್ಪ, ಹಾರೋಹಳ್ಳಿ ರವಿ, ವಕ್ಕಲೇರಿ ರಾಜಪ್ಪ, ಮಂಜುಳ ನಾಗರಾಜ್, ಚಿಕ್ಕವಲಗಮಾದಿ ಲಕ್ಷ್ಮಮ್ಮ, ಹಿರೇಕರಪನಹಳ್ಳಿ ರಾಮಪ್ಪ, ಮಲ್ಲಸಂದ್ರ ವೆಂಕಟಸ್ವಾಮಿ, ಸೀಪೂರ್ ದೇವರಾಜ್, ಬಂದಾರ್ಲಹಳ್ಳಿ ಮುನಿಯಪ್ಪ, ಶೇಷಪ್ಪ, ತಂಬಾರ್ಲಹಳ್ಳಿ ರಾಮಪ್ಪ, ವೇಮಗಲ್ ಮುರಳಿ ಭಾಗವಹಿಸಿದ್ದರು.

ವಿಶೇಷ ಮತದಾರರ ಪರಿಷ್ಕರಣೆ ನಡೆಸಿ ದೇಶದ ಪ್ರಜೆಗಳನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕುವುದು ಸಂವಿಧಾನ ಬಾಹಿರ ಕೆಲಸ. ಎಸ್‌ಐಆರ್ ಎನ್ನುವುದು ಅಸ್ಮಿತೆಗಳನ್ನು ಅಳಿಸಿ ಹಾಕುವ ತಂತ್ರಗಳ ಅಲೆಗಳಲ್ಲಿ ಒಂದು. ಈ ಬಗ್ಗೆ ದೇಶದ ಪ್ರತಿ ಮನೆಗೂ ಜಾಗೃತಿ ಮೂಡಿಸುವ ಕರಪತ್ರ ಹಂಚುವ ಚಳವಳಿ ನಡೆಸುವುದು ನಮ್ಮೆಲ್ಲರ ಕರ್ತವ್ಯ.

-ಕೋಟಿಗಾನಹಳ್ಳಿ ರಾಮಯ್ಯ, ಚಿಂತಕ, ಹಿರಿಯ ಸಾಹಿತಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News