Bengaluru | ನಟಿಯ ಸಹೋದರಿಯ ಮೇಲೆ ಅತ್ಯಾಚಾರ ಆರೋಪ: ಉದ್ಯಮಿಯ ಬಂಧನ
Update: 2026-08-13 20:33 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ಕನ್ನಡ ಚಲನಚಿತ್ರ ನಟಿಯೊಬ್ಬರ ಸಹೋದರಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಉದ್ಯಮಿಯೊಬ್ಬರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ರಾಘವೇಂದ್ರ ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ನಟಿಯೊಬ್ಬರ ಸಹೋದರಿಗೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಉದ್ಯಮಿ ರಾಘವೇಂದ್ರ ಪರಿಚಯವಾಗಿದ್ದು, ಆಕೆಯನ್ನು ಮದುವೆಯಾಗುವ ಭರವಸೆ ನೀಡಿ ತನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ತನ್ನ ಕ್ರೆಡಿಟ್ ಕಾರ್ಡ್ ಬಳಸಿ ಸಾಲ ಪಡೆದಿದ್ದಾರೆ ಎಂದು ನಟಿಯ ಸಹೋದರಿ ದೂರು ನೀಡಿದ್ದರು.
ರಾಘವೇಂದ್ರ ಈಗಾಗಲೇ ಮದುವೆಯಾಗಿರುವ ರಹಸ್ಯ ಬಯಲಾಗಿದ್ದು, ಆತನನ್ನು ಪ್ರಶ್ನಿಸಿದಾಗ ಇಬ್ಬರ ಜಗಳ ನಡೆದಿದೆ. ಆತನಿಂದ ದೂರವಾಗಲು ಯತ್ನಿಸಿದಾಗ ತನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದನು ಎಂದು ಸಂತ್ರಸ್ತೆಯು ದೂರಿನಲ್ಲಿ ಆರೋಪಿಸಿದ್ದಾಳೆ.