Monsoon session | ಸುಗಮ ಕಲಾಪಕ್ಕಾಗಿ ವಿಪಕ್ಷಗಳ ಸಹಕಾರ ಕೋರಿದ ಮುಖ್ಯಮಂತ್ರಿ
ಬೆಂಗಳೂರು : ವಿಧಾನ ಮಂಡಲದ ಅಧಿವೇಶನದ ಮೊದಲ ದಿನವಾದ ಗುರುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿರೋಧ ಪಕ್ಷದ ಸದಸ್ಯರ ಬಳಿ ತೆರಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ‘ಕಲಾಪವನ್ನು ಸುಗಮವಾಗಿ ನಡೆಯಲು ತಮ್ಮೆಲ್ಲರ ಸಹಕಾರ ಅಗತ್ಯ’ ಎಂದು ಕೋರಿದರು.
ಕಲಾಪ ಆರಂಭಕ್ಕೂ ಮುನ್ನ ಸಭಾಂಗಣದಲ್ಲಿ ಕರೆಗಂಟೆ ಮೊಳಗುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಆಸನಗಳ ಬಳಿ ತೆರಳಿ ಉಭಯ ಕುಶಲೋಪರಿ ವಿಚಾರಿಸಿದರು. ವಿರೋಧ ಪಕ್ಷದ ಹಲವು ಸದಸ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಅಧಿವೇಶನವನ್ನು ಸೌಹಾರ್ದಯುತವಾಗಿ ನಡೆಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿರೋಧ ಪಕ್ಷದ ಸದಸ್ಯರ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸುತ್ತಿದ್ದ ನಡುವೆ ಕರೆಗಂಟೆ ನಿಂತು, ಕಲಾಪ ಅಧಿಕೃತವಾಗಿ ಆರಂಭವಾಗಿ ವಂದೇ ಮಾತರಂ ಗಾಯನ ಪೂರ್ಣಗೊಂಡ ಬಳಿಕ ಮತ್ತೆ ವಿರೋಧ ಪಕ್ಷದ ಸಾಲಿನತ್ತ ಬಂದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಹಸ್ತ ಲಾಘವ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು.
ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನವನ್ನು ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ಆಡಳಿತ ಪಕ್ಷದ ಮೊಗಸಾಲೆಯಿಂದ ಸದನದ ಸಭಾಂಗಣ ಪ್ರವೇಶಿಸುವ ಮುನ್ನ ಸಭಾಂಗಣದ ಬಾಗಿಲಿಗೆ ದೀರ್ಘದಂಡ ನಮಸ್ಕಾರವನ್ನು ಹಾಕಿದರು. ಸಭಾಂಗಣದ ಒಳಗೆ ತಮ್ಮ ಕುರ್ಚಿಯಲ್ಲಿ ಆಸನರಾಗುವ ಮುನ್ನ ಮತ್ತೆ ಮುಂದಿನ ಮೇಜಿಗೆ ಹಣೆ ಮುಟ್ಟಿ ಡಿ.ಕೆ.ಶಿವಕುಮಾರ್ ನಮಸ್ಕರಿಸಿದ್ದು ವಿಶೇಷವಾಗಿತ್ತು.
ಅದೇ ರೀತಿ ಸಚಿವರಾದ ಕೃಷ್ಣ ಭೈರೇಗೌಡ, ಬಸವರಾಜ ರಾಯರೆಡ್ಡಿ, ಲಕ್ಷ್ಮಣ್ ಸವದಿ ಸೇರಿದಂತೆ ಹಲವು ಸಚಿವರು ವಿರೋಧ ಪಕ್ಷದ ಸದಸ್ಯರ ಸಾಲಿಗೆ ತೆರಳಿ ಮಾತುಕತೆ ನಡೆಸಿದ ದೃಶ್ಯ ಕಂಡುಬಂತು.