ಸಂವಿಧಾನಕ್ಕಿಂತ ಸನಾತನ ಧರ್ಮ ಶ್ರೇಷ್ಠ ಎನ್ನುವ ದೇಶದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ : ಬಿ.ಕೆ.ಹರಿಪ್ರಸಾದ್

Update: 2026-08-15 23:24 IST


ಬೆಂಗಳೂರು : ನಮ್ಮ ದೇಶವು 2014ರ ನಂತರ ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಜಾಪ್ರಭುತ್ವವು ಹಿಂದೆಂದೂ ಕಾಣದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಂವಿಧಾನಕ್ಕಿಂತ ಸನಾತನ ಧರ್ಮವೇ ಶ್ರೇಷ್ಠ ಎಂದು ವಾದಿಸುವ ದೇಶದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯು ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ‘ರಾಮನ ಭಕ್ತರು ಮಾತ್ರ ಈ ಬಗ್ಗೆ ಮಾತಾಡಬೇಕು, ಉಳಿದವರು ಮಾತಾಡುವ ಅಗತ್ಯವಿಲ್ಲ’ ಎಂದು ವಾದಿಸಲಾಗುತ್ತಿದೆ ಎಂದು ಟೀಕಿಸಿದರು.

ಆಪರೇಶನ್ ಸಿಂಧೂರ್‌ನಲ್ಲಿ ನಮ್ಮ ಯೋಧರು ಸತ್ತಿಲ್ಲ ಎಂದು ಘೋಷಿಸಿದ್ದ ಸರಕಾರ, ಆನಂತರ ಪ್ರಾಣಕಳಕೊಂಡವರ ಹೆಸರು ಬಿಡುಗಡೆ ಮಾಡಿ ನಗೆ ಪಾಟಲಿಗೆ ಗುರಿಯಾಯಿತು. ಆರೆಸ್ಸೆಸ್ ತನಗೆ ನೋಂದಣಿಯ ಅಗತ್ಯವೇ ಇಲ್ಲವೆಂದು ನಾಚಿಗೆ ಬಿಟ್ಟು ವಾದಿಸುತ್ತಿದೆ. ಸಂವಿಧಾನ ವಿರೋಧಿ ಕೃತ್ಯಗಳು ಈ ದಿನಗಳಲ್ಲಿ ಅತ್ಯಂತ ಸಹಜ ಪ್ರಕ್ರಿಯೆಗಳೊ ಎಂಬಂತೆ ನಡೆಯುತ್ತಿವೆ ಎಂದು ಹರಿಪ್ರಸಾದ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ವಿಜಯದೊಂದಿಗೆ ಆರಂಭವಾದ ಪ್ರಜಾಪ್ರಭುತ್ವದ ಸಮಕಾಲೀನ ಕುಸಿತವನ್ನು ನಾವೆಲ್ಲರೂ ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ತಡೆಯದೇ ಇದ್ದರೆ ಹಿರಿಯರು ನಮಗೆ ತಂದುಕೊಟ್ಟ ಸ್ವಾತಂತ್ರ್ಯಕ್ಕೆ ಯಾವ ಅರ್ಥವೂ ಉಳಿಯುವುದಿಲ್ಲ. ಮೋದಿಯವರ ಅಧಿಕಾರಾವಧಿಯಲ್ಲಿ, ಪ್ರಜಾಪ್ರಭುತ್ವದ ಪ್ರಮುಖ ಅಂಗಗಳೆಲ್ಲವೂ ಜಾರಿಯಲ್ಲಿದ್ದರೂ ಅವು ಶಾಸಕಾಂಗದ ಕೈವಶವಾಗಿ ಸಾಂಸ್ಥಿಕ ಸ್ವಾಯತ್ತೆಯನ್ನು ಕಳೆದುಕೊಂಡಿವೆ.


ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News