ಹನೂರು ಶೂಟೌಟ್ ಪ್ರಕರಣ; ನ್ಯಾಯಾಂಗ ತನಿಖೆಗೆ ಆರ್.ಅಶೋಕ್ ಆಗ್ರಹ
ಬೆಂಗಳೂರು : ಚಾಮರಾಜನಗರದ ಹನೂರಿನಲ್ಲಿ ಮೂವರು ರೈತರ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಉತ್ತರಗಳೇ ಪರಸ್ಪರ ತಾಳೆಯಾಗುತ್ತಿಲ್ಲ. ಅರಣ್ಯ ಇಲಾಖೆ ಒಂದು ರೀತಿಯ ಹೇಳಿಕೆ ನೀಡುತ್ತದೆ. ಸ್ಥಳೀಯ ಜನಪ್ರತಿನಿಧಿಗಳ ಹೇಳಿಕೆ ಮತ್ತೊಂದು ಕಥೆ ಹೇಳುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾತುಗಳಲ್ಲೂ ಅನುಮಾನಗಳಿಗೆ ಉತ್ತರ ಸಿಗುತ್ತಿಲ್ಲ. ಹಾಗಾದರೆ ನಿಜವಾದದ್ದು ಯಾವುದು? ಯಾರ ಮಾತನ್ನು ನಂಬಬೇಕು? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಹನೂರು ಶೂಟೌಟ್ ಪ್ರಕರಣ ಸಂಬಂಧ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸರ್ಕಾರವೇ ಸತ್ಯವನ್ನು ಸ್ಪಷ್ಟಪಡಿಸಬೇಕಾದ ಪ್ರಕರಣದಲ್ಲಿ, ಅಧಿಕಾರಿಗಳ ಹೇಳಿಕೆಗಳಲ್ಲೇ ಇಷ್ಟೊಂದು ವೈರುಧ್ಯವಿರುವುದು ಅತ್ಯಂತ ಗಂಭೀರ ಸಂಗತಿ. ಮೂವರು ಜೀವಗಳು ಹೋಗಿವೆ. ಇದು ಕೇವಲ ಒಂದು ಇಲಾಖೆಯ ಕ್ರಮದ ಪ್ರಶ್ನೆಯಲ್ಲ - ಅಧಿಕಾರದ ದುರುಪಯೋಗವಾಗಿದೆಯೇ? ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ? ಗುಂಡಿನ ದಾಳಿ ಅನಿವಾರ್ಯವಾಗಿತ್ತೇ? ಘಟನೆಯ ನಂತರ ಸಾಕ್ಷ್ಯಗಳನ್ನು ಸಂರಕ್ಷಿಸಲಾಗಿದೆಯೇ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಅಥವಾ ಅರಣ್ಯ ಇಲಾಖೆಯ ಆಂತರಿಕ ತನಿಖೆಯಿಂದ ಸತ್ಯ ಹೊರಬರುವುದಿಲ್ಲ. ಸರ್ಕಾರದ ಅಧೀನದಲ್ಲಿರುವ ಇಲಾಖೆಯೇ ಆರೋಪದ ಕೇಂದ್ರವಾಗಿರುವಾಗ, ಅದೇ ವ್ಯವಸ್ಥೆಯಿಂದ ತನಿಖೆ ನಡೆಸುವುದು ನ್ಯಾಯಸಮ್ಮತವಲ್ಲ. ಆದ್ದರಿಂದ ಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಪ್ರಕರಣದಲ್ಲಿ ತಕ್ಷಣ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮೂವರು ರೈತರ ಸಾವಿನ ಹಿಂದಿನ ಸಂಪೂರ್ಣ ಸತ್ಯ ಹೊರಬರಬೇಕು. ತಪ್ಪಿತಸ್ಥರು ಯಾರೇ ಆಗಿರಲಿ - ಅರಣ್ಯ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ, ರಾಜಕೀಯ ಪ್ರಭಾವಿಗಳಾಗಲಿ - ಕಾನೂನಿನ ಮುಂದೆ ನಿಲ್ಲಿಸಬೇಕು. ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ಮುಚ್ಚಿಡುವುದೇನೂ ಇಲ್ಲದಿದ್ದರೆ, ನ್ಯಾಯಾಂಗ ತನಿಖೆಗೆ ಏಕೆ ಭಯ? ಅಮಾಯಕ ರೈತರ ಜೀವಕ್ಕೆ ನ್ಯಾಯ ಸಿಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯೊಂದೇ ದಾರಿ
— R. Ashoka (@RAshokaBJP) August 15, 2026
ಚಾಮರಾಜನಗರದ ಹನೂರಿನಲ್ಲಿ ಮೂವರು ರೈತರ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಉತ್ತರಗಳೇ ಪರಸ್ಪರ ತಾಳೆಯಾಗುತ್ತಿಲ್ಲ.
ಅರಣ್ಯ ಇಲಾಖೆ ಒಂದು ರೀತಿಯ ಹೇಳಿಕೆ ನೀಡುತ್ತದೆ. ಸ್ಥಳೀಯ ಜನಪ್ರತಿನಿಧಿಗಳ ಹೇಳಿಕೆ ಮತ್ತೊಂದು ಕಥೆ ಹೇಳುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾತುಗಳಲ್ಲೂ…