ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ 250ಕೋಟಿ ರೂ.ಅನುದಾನ ಬಿಡುಗಡೆಗೆ ಆಗ್ರಹ
ಬೆಂಗಳೂರು : ಕರ್ನಾಟಕದ ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಬಜೆಟ್‍ನಲ್ಲಿ ಘೋಷಿಸಲಾಗಿರುವ 250ಕೋಟಿ ರೂ.ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಕ್ರೈಸ್ತ ಸಂಘಟನೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೊ ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ಅವರು, ಬಜೆಟ್‍ನಲ್ಲಿ 250ಕೋಟಿ ರೂ. ಅನುದಾನ ಘೋಷಿಸಲಾಗಿದ್ದರೂ, ಪ್ರಸ್ತುತ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಕೇವಲ 85ಕೋಟಿ ರೂ.ಮಾತ್ರ ಬಿಡುಗಡೆ ಮಾಡಲಾಗಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಚರ್ಚ್‍ಗಳ ಅಭಿವೃದ್ಧಿ, ಕ್ರೈಸ್ತ ಸಮಾಧಿ ಸ್ಥಳಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಸಮುದಾಯ ಭವನಗಳು ಹಾಗೂ ಸಮುದಾಯ ಕೇಂದ್ರಗಳ ನಿರ್ಮಾಣ ಮತ್ತು ಅಭಿವೃದ್ಧಿ, ಹಿಂದುಳಿದ ಕ್ರೈಸ್ತ ಕುಟುಂಬಗಳಿಗೆ ನೆರವು, ಕ್ರೈಸ್ತ ಯುವಜನರು ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತಾ ಕಾರ್ಯಕ್ರಮಗಳು, ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಸೇರಿ ಅಗತ್ಯಗಳನ್ನು ಕೇವಲ 85ಕೋಟಿ ರೂ. ಅನುದಾನದಿಂದ ಪೂರೈಸಲು ಸಾಧ್ಯವಾಗಬಹುದು ಎಂದು ತಿಳಿಸಿದ್ದಾರೆ.
ಕ್ರೈಸ್ತ ಸಮುದಾಯವು ಕರ್ನಾಟಕದ ಅಭಿವೃದ್ಧಿಗೆ, ವಿಶೇಷವಾಗಿ ಶಿಕ್ಷಣ, ಆರೋಗ್ಯ ಸೇವೆ, ಸಮಾಜ ಸೇವೆ ಹಾಗೂ ಧರ್ಮಾರ್ಥ ಮತ್ತು ಸೇವಾ ಚಟುವಟಿಕೆಗಳ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ. ಸಮುದಾಯದ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಆರ್ಥಿಕ ಅಭಿವೃದ್ಧಿ ಹಾಗೂ ವೃತ್ತಿಪರ ಪ್ರಗತಿಗೆ ಸಮರ್ಪಕ ಅವಕಾಶಗಳನ್ನು ಕಲ್ಪಿಸುವುದರಿಂದ ಅವರು ನಮ್ಮ ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.