ಬೆಂಗಳೂರಿನಲ್ಲಿ ನಡೆದ ‘ಜಮೀಯತ್ ಸದ್ಭಾವನಾ ಮಂಚ್’ ಸಮ್ಮೇಳನ
ರಾಜ್ಯ ವ್ಯಾಪಿ ‘ಕೋಮು ದಳ್ಳುರಿ ನಿಯಂತ್ರಣಕ್ಕೆ’ ಕರೆ
ಬೆಂಗಳೂರು : ರಾಜ್ಯದಲ್ಲಿ ಜಾತಿ, ಧಾರ್ಮಿಕ ಸಮುದಾಯಗಳ ನಡುವೆ ಅಪನಂಬಿಕೆ ಹಾಗೂ ದ್ವೇಷ ಬಿತ್ತುವ ಚಟುವಟಿಕೆಗಳು ಹದ್ದುಮೀರಿ ನಡೆಯುತ್ತಿರುವ ಹಿನ್ನೆಲೆ ಪ್ರತಿ ಜಿಲ್ಲೆಯಲ್ಲೂ ಕೋಮು ದಳ್ಳುರಿ ತಗ್ಗಿಸಲು ಭಿನ್ನವಾದ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ‘ಜಮೀಯತ್ ಸದ್ಭಾವನಾ ಮಂಚ್’ ಸಮ್ಮೇಳನದಲ್ಲಿ ಧಾರ್ಮಿಕ ಗುರುಗಳು, ಚಿಂತಕರು, ಹೋರಾಟಗಾರರು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯ ವ್ಯಕ್ತಿಗಳು ಒಕ್ಕೊರಲಿನಿಂದ ಕರೆ ನೀಡಿದ್ದಾರೆ.
ಶನಿವಾರ ನಗರದ ಶಾಸಕರ ಭವನದಲ್ಲಿ ಜಮೀಯತ್ ಉಲಮಾ ಕರ್ನಾಟಕ ಹಮ್ಮಿಕೊಂಡಿದ್ದ ‘ಜಮೀಯತ್ ಸದ್ಭಾವನಾ ಮಂಚ್’ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಜಮೀಯತ್ ಉಲಮಾ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ, ಜಮೀಯತ್ ಉಲಮಾ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮುಫ್ತಿ ಶಂಸುದ್ದೀನ್ ಬಜಲಿ ಖಾಸ್ಮಿ, ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಜಮೀಯತ್ ಸದ್ಭಾವನಾ ಮಂಚ್’ ಪ್ರಮುಖ ಸಂಚಾಲಕ ಸೈಯದ್ ಶಫೀವುಲ್ಲಾ, ಸಿಟಿ ಮಾರುಕಟ್ಟೆಯ ಜಾಮೀಯಾ ಮಸೀದಿಯ ಖತೀಬ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ, ಚಿಂತಕರಾದ ಯೋಗೇಶ್ ಮಾಸ್ಟರ್, ಮಂಗಳೂರು ವಿಜಯಾ, ಬೆಂಗಳೂರಿನ ಗುರುದ್ವಾರ ಕಮಿಟಿ ಕಾರ್ಯದರ್ಶಿ ಹರ್ಮಿಂಧರ್ ಸಿಂಗ್, ಬೌದ್ಧ ಸಮಾಜದ ಹರ್ಷ್, ಹೋರಾಟಗಾರ್ತಿ ತಾರಾ ರಾವ್, ಹಿರಿಯಪತ್ರಕರ್ತ ಶಶಿಧರ್ ಭಟ್, ರಾ.ಚಿಂತನ್ ಸೇರಿದಂತೆ ಪ್ರಗತಿಪರ ಚಿಂಕತರು, ಹೋರಾಟಗಾರರು ಪಾಲ್ಗೊಂಡು, ಸಮಾಜದಲ್ಲಿ ಕೋಮು ವಿಷ ಮತ್ತಷ್ಟು ಹರಡುವ ಮುನ್ನವೇ ತಳಮಟ್ಟದಲ್ಲಿ ಸೌಹಾರ್ದತೆ ಕುರಿತು ಜಾಗೃತಿಗಳನ್ನು ಹೆಚ್ಚಿಸಬೇಕು. ಪ್ರತಿಯೊಬ್ಬರಿಗೆ ಸಂವಿಧಾನ ಮತ್ತು ಅದರಲ್ಲಿನ ಆಶಯ ಕುರಿತು ಮನದಟ್ಟು ಮಾಡಿಕೊಡುವ ಕೆಲಸ ತ್ವರಿತವಾಗಿ ಆಗಬೇಕು ಎಂದು ನಿರ್ಣಯ ಪ್ರಕಟಿಸಿದರು.
ಸಮ್ಮೇಳನದ ಪ್ರಧಾನ ಭಾಷಣ ಮಾಡಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು, ಶ್ರಮ, ತಾಳ್ಮೆ ಹಾಗೂ ದೂರದೃಷ್ಟಿಯಿಂದ ರೂಪಿಸಿದ ಸಂವಿಧಾನವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮರು ವ್ಯಾಖ್ಯಾನ ಮಾಡಲಾಗುತ್ತಿದೆ.ಆದರೆ, ಭಾರತದ ಮಹಾನಾಯಕರು ಸೌಹಾರ್ದ, ಸಮಾನತೆ, ಜಾತ್ಯತೀತ, ಸಾಮಾಜವಾದ, ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವವಿರುವ ಅಭೂತಪೂರ್ವ ಲಿಖಿತ ಸಂವಿಧಾನವನ್ನು ದೇಶದ ಜನರಿಗೆ ನೀಡಿದ್ದಾರೆ. ಪ್ರಸ್ತಾವನೆಯೇ ಸಂವಿಧಾನದ ಆಶಯವನ್ನು ಬಿಂಬಿಸುತ್ತದೆ. ಅಂತಹ ಸಂವಿಧಾನವನ್ನು ಬದಲಾಯಿಸುವ ಸಾಹಸ ಮಾಡಬಾರದು ಎಂದು ತಿಳಿಸಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಮಾತನಾಡಿ, ಸಂವಿಧಾನ ರಚನಾ ಸಭೆಯ ಸದಸ್ಯರ ಸ್ಥಿತಿ ಪ್ರಜ್ಞೆಯ ಕಾರಣದಿಂದಾಗಿ ಸುಭದ್ರ ಸಂವಿಧಾನ ರಚಿಸಲು ಸಾಧ್ಯವಾಯಿತು. ವಿಭಜನೆ, ಕೋಮು ಸಂಘರ್ಷ, ಕಲುಷಿತ ವಾತಾವರಣ ಇದ್ದರೂ, ವೈವಿಧ್ಯ ಬಹುತ್ವದ ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ನಿಷ್ಪಕ್ಷಪಾತ ಚುನಾವಣೆ, ಶಾಂತಿಯುತ ಅಧಿಕಾರ ಬದಲಾವಣೆ ಸಾಧ್ಯವಾಗಿರುವುದೇ ಸಂವಿಧಾನದ ಗಟ್ಟಿತನಕ್ಕೆ ಸಾಕ್ಷಿ ಎಂದು ಬಣ್ಣಿಸಿದರು.
ಜಮೀಯತ್ ಉಲಮಾ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ ಮಾತನಾಡಿ, ಸಾಮಾಜಿಕ ನ್ಯಾಯ, ಹಕ್ಕಿನ ಕುರಿತು ಸದಾ ಧ್ವನಿ ಎತ್ತುತ್ತಿದ್ದ ದೇಶದಲ್ಲಿ ಸೌಹಾರ್ದ ಕುರಿತು ಮಾತನಾಡಬೇಕಿರುವುದು ವಿಪರ್ಯಾಸ. ಒಟ್ಟಿಗೆ ಬಾಳುವ ನಾವು ನಮ್ಮವರ ಎದುರೇ ನ್ಯಾಯ ಕೇಳುವ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚಿಂತಕ ಯೋಗೇಶ್ ಮಾಸ್ಟರ್ ಮಾತನಾಡಿ, ಸೌಹಾರ್ದ ಕುರಿತು ಕಲೆರಂಗದಲ್ಲೂ ಹೆಚ್ಚಿನ ಚಟುವಟಿಕೆಗಳನ್ನು ನಡೆಸಬೇಕು. ಸಿನೆಮಾ, ರಂಗಭೂಮಿ, ಸಾಹಿತ್ಯ ಹೀಗೆ ಎಲ್ಲ ಕಡೆಯೂ ಸೌಹಾರ್ದವುಳ್ಳ ಸಂದೇಶಗಳನ್ನು ಹೆಚ್ಚು ಹೆಚ್ಚು ತಿಳಿಸಬೇಕಾಗಿದೆ. ಜತೆಗೆ ಯುವ ಜನತೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಜಮೀಯತ್ ಸದ್ಭಾವನಾ ಮಂಚ್ ಪ್ರಮುಖ ಸಂಚಾಲಕ ಸೈಯದ್ ಶಫೀವುಲ್ಲಾ ಮಾತನಾಡಿ, ಸಮ್ಮೇಳನದಲ್ಲಿ ನಾಡಿನ ಸಾಹಿತಿಗಳು, ಚಿಂತಕರು ಹತ್ತು ಹಲವುಗಳನ್ನು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಕೋಮು ದಳ್ಳುರಿ ತಗ್ಗಿಸಲು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.
ನಾವು ನಮ್ಮಲಿರುವ ಸೌಹಾರ್ದ ಹಾಗೂ ಒಂದುಗೂಡುವ ಸಂಸ್ಕೃತಿ ಬಗ್ಗೆ ತಿಳಿಯಬೇಕಾಗಿದೆ. ಸಮಗ್ರ ಭಾರತದ ಏಕತೆಗಾಗಿ ಶರಣರ ನುಡಿಗನುಸಾರವಾಗಿ ಸರ್ವರೂ ಸಹಬಾಳ್ವೆಯಿಂದ ಸಾಗಿದಾಗ ನಮ್ಮಲ್ಲಿನ ಪರಸ್ಪರ ಅಪನಂಬಿಕೆ ಮಾಯವಾಗಿ ಕೋಮು ದುಳ್ಳುರಿ ತಗ್ಗಿ ಕೋಮುವಾದ ಹಂತ ಹಂತವಾಗಿ ನಿರ್ಮೂಲನೆ ಆಗುತ್ತದೆ.
ಶಿವರುದ್ರ ಸ್ವಾಮೀಜಿ, ಬೇಲಿಮಠ ಮಹಾಸಂಸ್ಥಾನ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದರೂ, ಕೋಮುವಾದಿ ಪತ್ರಕರ್ತರ ಮೇಲೆ ನಿಯಂತ್ರಣ ಹೇರಿಲ್ಲ. ಬದಲಾಗಿ ಅವರೇ ಕಾಂಗ್ರೆಸ್ ಕಚೇರಿಯಲ್ಲಿ ತುಂಬಿದ್ದಾರೆ. ಮತ್ತೊಂದೆಡೆ ಅವರಿಗೆ ಕೋಟ್ಯಂತರ ರೂ. ಸರಕಾರದಿಂದಲೇ ನೀಡಲಾಗುತ್ತಿದೆ. ಒಂದೆಡೆ ಪ್ರಗತಿಪರರು, ಬುದ್ಧಿಜೀವಿಗಳು ಯಾವುದೇ ಲಾಭ ಇಲ್ಲದೆ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಸರಕಾರವೇ ಕೋಮುವಾದಿ ಮನಸ್ಥಿತಿ ಪತ್ರಕರ್ತರನ್ನು ಪೋಷಣೆ ಮಾಡುತ್ತಿದೆ ಎಂದು ಸಮ್ಮೇಳನದಲ್ಲಿ ಚಿಂತಕ ರಾ.ಚಿಂತನ್ ಬೇಸರ ವ್ಯಕ್ತಪಡಿಸಿದರು.