ಬೆಂಗಳೂರು : ಜಗತ್ತು ಹಿಂಸೆ, ಕ್ರೌರ್ಯ, ದ್ವೇಷ ಮತ್ತು ಸೇಡಿನಿಂದ ಉರಿಯುತ್ತಿರುವ ಸಂದರ್ಭದಲ್ಲಿ ವಿಶ್ವಶಾಂತಿ ಸ್ಥಾಪನೆಯಾಗಬೇಕಾದರೆ ರಾಜಕೀಯ ಕ್ಷೇತ್ರಕ್ಕೆ ಸಾಂಸ್ಕೃತಿಕ ಮನಸ್ಸುಗಳ ಪ್ರವೇಶ ಅಗತ್ಯ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕಲಾಗ್ರಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯ, ರಂಗಭೂಮಿ, ಸಂಗೀತ, ನೃತ್ಯ ಸೇರಿದಂತೆ ಎಲ್ಲ ಕಲಾ ಪ್ರಕಾರಗಳ ಮೂಲ ದ್ರವ್ಯ ಮಾನವೀಯತೆ ಮತ್ತು ಮಾನವ ಅಂತಃಕರಣ. ತಾಯಿಯ ಹೃದಯದಂತಹ ಭಾವ ಸಂಸ್ಕಾರವನ್ನು ಕಲೆ ಮನುಷ್ಯನಿಗೆ ನೀಡುತ್ತದೆ. ಸಮಾಜದಲ್ಲಿ ನಾಗರಿಕತೆಯ ಬೆಳವಣಿಗೆ ಮಾತ್ರ ಸಾಲದು, ನಾಗರಿಕತೆಯೊಳಗೆ ಸಾಂಸ್ಕೃತಿಕ ಮನಸ್ಸುಗಳೂ ಬೆಳೆಯಬೇಕು. ಆಗ ಮಾತ್ರ ವಿಶ್ವಶಾಂತಿ ಸಾಧ್ಯವಾಗುತ್ತದೆ ಎಂದರು.

ಸಾಂಸ್ಕೃತಿಕ ವಾತಾವರಣದ ಕಡೆಗಣನೆಯೂ ಹಿಂಸೆ ಮತ್ತು ಕ್ರೌರ್ಯ ಹೆಚ್ಚಲು ಕಾರಣವಾಗುತ್ತದೆ. ಟ್ರಂಪ್, ನೆತನ್ಯಾಹು, ಪುಟಿನ್ ಯಾರೇ ಇರಬಹುದು ಅಥವಾ ಯಾವುದೇ ರಾಜಕಾರಣಿಯಾಗಿರಬಹುದು. ಎಲ್ಲರಿಗೂ ಮುಖ್ಯವಾಗಿ ಬೇಕಾಗಿರುವುದು ಸಾಂಸ್ಕೃ ತಿಕ ಮನಸ್ಸು. ತಾಯಿಯ ಹೃದಯವನ್ನು ಒಳಗೊಂಡಂತೆ ಲೋಕವನ್ನು ನೋಡುವ ಗುಣ, ಜೀವಜಗತ್ತನ್ನು ಕಾಪಾಡುವ ಮಾನವ ಧರ್ಮದ ಅರಿವು ಅಗತ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಎಲ್ಲ ಧರ್ಮಗಳ ಆಶಯವನ್ನು ಒಳಗೊಂಡು ಜೀವಜಗತ್ತನ್ನು ಕಾಪಾಡುವ ನಿರ್ಗಮನಿಷ್ಠ ಧರ್ಮವೇ ನಿಜವಾದ ಮಾನವ ಧರ್ಮ. ಆ ಮಾನವೀಯತೆಯನ್ನು ಬೆಳೆಸುವ ಜವಾಬ್ದಾರಿ ಕಲಾರಂಗಗಳ ಮೇಲಿದೆ. ಮನುಷ್ಯ ಜಾತಿ ಒಂದೇ ಎಂಬ ಅರಿವು ಮತ್ತು ಪ್ರತಿದಿನವೂ ನಮ್ಮ ವಿವೇಕವನ್ನು ಹೊಸದಾಗಿಸಿಕೊಳ್ಳುವುದೇ ನಿಜವಾದ ಧರ್ಮ. ಶ್ರೇಷ್ಠ ಕಲೆ ಮತ್ತು ಸಾಹಿತ್ಯಕ್ಕೆ ಹಳತಾಗುವ ಗುಣವಿಲ್ಲ. ಪರಂಪರೆಯ ಧಾತುವಿನೊಳಗೇ ಅದು ವರ್ತಮಾನಕ್ಕೆ ತಕ್ಕಂತೆ ನಿತ್ಯ ನೂತನವಾಗಿ ರೂಪುಗೊಳ್ಳುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ, ರಂಗಕರ್ಮಿ ಡಾ.ಶ್ರೀನಿವಾಸ ಜಿ.ಕಪ್ಪಣ್ಣ, ಸಂಸ್ಕೃ ತಿ ಇಲಾಖೆ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ, ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ಪ್ರಶಸ್ತಿ ಪುರಸ್ಕೃತರಾದ ಪಂ.ವಿಶ್ವನಾಥ್ ನಾಕೋಡ್, ಶಕುಂತಲಾ ರಾಘವೇಂದ್ರ, ಡಾ.ಟಿ.ಟಿ.ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor