ಎಲಿವೇಟೆಡ್ ಕಾರಿಡಾರ್ ವಿರುದ್ಧ ಮೌನ ಪ್ರತಿಭಟನೆ
ಬೆಂಗಳೂರು : ಜಯನಗರದ ರಾಗಿಗುಡ್ಡ- ಕನಕಪುರ ಎಲಿವೇಟೆಡ್ ಕಾರಿಡಾರ್ ವಿರುದ್ಧ ಮಾನವ ಸರಪಳಿ ರಚಿಸಿ ಜಯನಗರದ ವೈಷ್ಣವಿ ಪ್ಯಾರಡೈಸ್ ಅಪಾರ್ಟ್ ಮೆಂಟ್ ಮಾಲಕರ ಕಲ್ಯಾಣ ಸಂಘದ ನೇತೃತ್ವದಲ್ಲಿ ರವಿವಾರ ಜಯನಗರದ 6ನೇ ಬ್ಲಾಕ್‌ನ ರೋಸ್ ಗಾರ್ಡನ್ ಬಳಿ ಮೌನ ಪ್ರತಿಭಟನೆ ನಡೆಯಿತು.
ರೋಸ್ ಗಾರ್ಡನ್ ಬಳಿ ಯುವಜನರು, ಹಿರಿಯ ನಾಗರಿಕರು ಸೇರಿ ನೂರಕ್ಕೂ ಹೆಚ್ಚು ಮಂದಿ, ಪೈಪ್‌ಲೈನ್ ಮೇಲೆ ಪಿಲ್ಲರ್, ಅಪಾಯದ ಯೋಜನೆ, ಸಂಚಾರ ದಟ್ಟಣೆ ಬೇಡ, ಮರಗಳು ಬೇಕು, ಮೆಟ್ರೊ ಈಗಾಗಲೇ ಇದೆ, ಎಲಿವೇಟೆಡ್ ಕಾರಿಡಾರ್ ಯಾಕೆ? ಎಂಬ ಫಲಕಗಳನ್ನು ಹಿಡಿದು ಪ್ರತಿರೋಧವನ್ನು ವ್ಯಕ್ತಪಡಿಸಿದರು.
ನಿವಾಸಿ ಡಿ.ಎನ್.ಗುರುಪ್ರಸಾದ್ ಮಾತನಾಡಿ, ಎಲಿವೇಟೆಡ್ ಕಾರಿಡಾರ್ ಬೇಡ. ಮೆಟ್ರೊ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಮೆಟ್ರೊ ರೈಲು ಹಸಿರು ಮಾರ್ಗ ಸುಧಾರಿಸಬೇಕು. ಪ್ರಸ್ತಾವಿತ ರಾಗಿಗುಡ್ಡ-ಕನಕಪುರ ಎಲಿವೇಟೆಡ್ ಕಾರಿಡಾರ್ ಮೆಟ್ರೊ ರೈಲು ಹಸಿರು ಮಾರ್ಗಕ್ಕೆ ಸಮಾನಂತರವಾಗಿ ಹಾಗೂ ದಕ್ಷಿಣ ಬೆಂಗಳೂರಿಗೆ ನೀರು ಪೂರೈಸುವ ಕಾವೇರಿನ ನೀರಿನ ಪೈಪ್‌ಲೈನ್ ಮಾರ್ಗದಲ್ಲಿ ಹಾದು ಹೋಗುತ್ತದೆ. ಮನೆಗಳು, ಉದ್ಯಾನ ಮತ್ತು ಬಡಾವಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ವಸತಿ ಪ್ರದೇಶದಲ್ಲಿ ಎಲಿವೇಟೆಡ್ ಕಾರಿಡಾರ್ ಅಗತ್ಯವಿಲ್ಲ. ಈ ಮಾರ್ಗದಲ್ಲಿ ರೋಸ್ ಗಾರ್ಡನ್, ಪೈಪ್‌ಲೈನ್ ಮೇಲಿರುವ ಉದ್ಯಾನಗಳು, ತಲಘಟ್ಟಪುರ ಕೆರೆ ಉದ್ಯಾನ, ಕನಕಪುರ ರಸ್ತೆ ಬಳಿ ಅರಣ್ಯ ಪ್ರದೇಶವಿದೆ ಎಂದು ಗುರುಪ್ರಸಾದ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಿವಾಸಿಗಳಾದ ಕೆ.ಜಿ.ಮುರಳಿ, ರಾಜೀವ್ ರಾವ್, ರೋಹನ್ ಕಿಣಿ, ವಿನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.