ಬೆಂಗಳೂರು : ಬೆಂಗಳೂರು ನಗರ ದಕ್ಷಿಣ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯಾಧಿಕಾರಿ(ಆರ್‌ಎಫ್‌ಒ) ಕೆ.ಟಿ.ಮಂಜುನಾಥ್ ವಿರುದ್ಧ ಜಾತಿ ನಿಂದನೆ, ಲಂಚದ ಬೇಡಿಕೆ ಮತ್ತು ಜೀವ ಬೆದರಿಕೆ ಆರೋಪದಡಿಯಲ್ಲಿ ನಗರದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಥಮ ದರ್ಜೆಯ ಸಿವಿಲ್ ಗುತ್ತಿಗೆದಾರ ಶ್ರೀನಿವಾಸ ವಿ. ಎಂಬವರು ಆರ್‌ಎಫ್‌ಒ ಅಧಿಕಾರಿ ಕೆ.ಟಿ.ಮಂಜುನಾಥ್ ವಿರುದ್ಧ ಲಂಚದ ಬೇಡಿಕೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ನೀಡಿದ ದೂರಿನನ್ವಯ ಸಿದ್ದಾಪುರ ಠಾಣೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ವಿವರ:

ದೂರುದಾರ ಶ್ರೀನಿವಾಸ ವಿ. ಅವರು ಮೂಲತಃ ಕನಕಪುರ ತಾಲೂಕಿನ ಪರಿಶಿಷ್ಟ ಜಾತಿಗೆ ಸೇರಿದ ಗುತ್ತಿಗೆದಾರರಾಗಿದ್ದು, 15 ವರ್ಷಗಳಿಂದ ಬಿಬಿಎಂಪಿ/ಜಿಬಿಎ ದಕ್ಷಿಣ ವಲಯದಲ್ಲಿ ಮಳೆ ನೀರು ಕಾಲುವೆ ಹಾಗೂ ಮರಗಳ ನಿರ್ವಹಣೆ ಕಾಮಗಾರಿ ಮಾಡುತ್ತಿದ್ದಾರೆ.

ಅವರ ಕಾಮಗಾರಿಯ ಒಟ್ಟು ಬಿಲ್ ಮೊತ್ತ 42.39 ಲಕ್ಷ ರೂ.ಬಾಕಿ ಇದ್ದು, ಪಾರ್ಟ್ ಬಿಲ್ ಮಾಡಿಕೊಡಲು ಈಗಾಗಲೇ ಆರೋಪಿ ಕೆ.ಟಿ.ಮಂಜುನಾಥ್ 2 ಲಕ್ಷ ರೂ. ಪಡೆದಿದ್ದರೂ ಬಿಲ್ ಮಾಡದೆ ಸತಾಯಿಸುತ್ತಿದ್ದರು. ಅ.5ರ ಸೋಮವಾರ ಮಧ್ಯಾಹ್ನ ಜಿಬಿಎ ಜಯನಗರದ ದಕ್ಷಿಣ ವಲಯದ ಕಚೇರಿಯಲ್ಲಿ ಕೆ.ಟಿ.ಮಂಜುನಾಥ್ ಅವರನ್ನು ಭೇಟಿ ಮಾಡಿ ಕಾಮಗಾರಿ ಬಿಲ್ ಬಗ್ಗೆ ವಿಚಾರಿಸಿದಾಗ, ಮತ್ತೆ 50 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರುದಾರರು ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಸಿಟ್ಟಿಗೆದ್ದ ಅಧಿಕಾರಿ ಕೆ.ಟಿ.ಮಂಜುನಾಥ್ ಸಾರ್ವಜನಿಕವಾಗಿ ಕೆಟ್ಟ ಶಬ್ದಗಳಲ್ಲಿ ತನ್ನನ್ನು ಜಾತಿ ನಿಂದನೆ ಮಾಡಿ, ಕೊರಳಪಟ್ಟಿ ಹಿಡಿದು ಎಳೆದಾಡಿ, ಕೊಲೆ ಮಾಡುವುದಾಗಿ ಮತ್ತು ನನ್ನ ಕುಟುಂಬಕ್ಕೆ ಸಹ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor