Bengaluru | ಸರ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ, ದ್ವಿಚಕ್ರ ವಾಹನ ಜಪ್ತಿ
ಸಾಂದರ್ಭಿಕ ಚಿತ್ರ
ಬೆಂಗಳೂರು : ಅಸಲಿ ಚಿನ್ನವೆಂದು ಉಮಾಗೋಲ್ಡ್ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ದೇವನಹಳ್ಳಿ ಠಾಣಾ ಪೊಲೀಸರು, 7 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಗಲಕೋಟೆಯ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ತೋಟಕ್ಕೆ ಹೋಗಿ ಹೂವನ್ನು ತೆಗೆದುಕೊಂಡು ಸಂಜೆ ವಾಪಸ್ ಮನೆಗೆ ಹೋಗುತ್ತಿರಬೇಕಾದರೆ ಬೂದಿಗೆರೆ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಇಬ್ಬರು ಅಪರಿಚಿತ ವ್ಯಕ್ತಿಗಳು ವಿಳಾಸ ಕೇಳುವ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದು, ಕತ್ತಿನಲ್ಲಿದ್ದ ಉಮಾಗೋಲ್ಡ್ ಮಾಂಗಲ್ಯ ಸರ ಹಾಗೂ ಸರದಲ್ಲಿದ್ದ ಚಿನ್ನದ ತಾಳಿ, ಎರಡು ಗುಂಡು, 1 ಲಕ್ಷ್ಮೀಕಾಸನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಕುರಿತು ಠಾಣೆಯಲ್ಲಿ ಸರ ಕಳವು ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆಹಾಕಿ, ಇಬ್ಬರು ಆರೋಪಿಗಳನ್ನು ದೊಡ್ಡಬನಹಳ್ಳಿ ಗ್ರಾಮದಲ್ಲಿ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಳವು ಮಾಡಿದ್ದ ಚಿನ್ನಾಭರಣವನ್ನು ಠಾಣಾ ಸರಹದ್ದಿನ ಜ್ಯೂವೆಲ್ಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿರುವುದಾಗಿ ತಿಳಿಸಿದ್ದು, ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಜ್ಯೂವೆಲ್ಲರಿ ಅಂಗಡಿಯಿಂದ 7 ಗ್ರಾಂ ಚಿನ್ನಾಭರಣವನ್ನು(ಚಿನ್ನದ ತಾಳಿ, ಎರಡು ಗುಂಡು, 1 ಲಕ್ಷ್ಮೀಕಾಸು) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.